Monday, 30 December 2019

HIND MUNNUDI ಹಿಂದ್ ಮುನ್ನುಡಿ 🤔😀

 


ಹಿಂದ್ ಮುನ್ನುಡಿ (ಕಾಲ್ಪನಿಕ ಬರಹ) Imaginative story -Time 1980s

ಇದೇನಿದು ಹಿಂದಿನ ನುಡಿಯೋ ಅಥವಾ ಹಿಂದೆ ಯಾವಾಗಲೋ ಬರೆದ ಮುನ್ನುಡಿಯೋ ಅಥವಾ ಹಿಂದ್ ಮುಂದ್ ಗೊತ್ತಿಲ್ಲದ ನುಡಿಯೋ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದೀರಾ! ನೀವು ಎಣಿಸಿದಂತೆ ಇದಾವುದೂ ಅಲ್ಲ. ನಿಧಾನವಾಗಿ ಓದುತ್ತಾ ಹೋದಂತೆ ಇದಾವ ನುಡಿಯೆಂದು ನಿಮಗೇ ಅರ್ಥವಾಗಬಹುದೆಂದು ಭಾವಿಸಿ ನನ್ನೀ ನುಡಿಗಳನ್ನು ನಿಮ್ಮಡಿಯಲ್ಲಿಡುತ್ತಿದ್ದೇನೆ. ನಿಮ್ಮೆಲ್ಲರ ಕಿಡಿನುಡಿ ಟೀಕೆಗಳಿಗಾಗಿ ಕಾಡಿ ಬೇಡುತ್ತಿದ್ದೇನೆ.  

1980 ರಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನನಗೆ ಮುಂಬಯಿಯಲ್ಲಿರುವ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದ ಖುಶಿ ನನ್ನನ್ನು ಅಟ್ಟಕ್ಕೇರಿಸಿದ  ಸಂತೋಷದ ಗುಂಗಿನಲ್ಲಿ ಒಂದು ಭಯ ಕೂಡ ಕಾಡಲು ಪ್ರಾರಂಭಿಸಿತು.  ಭಯದ ಕಾರಣ ಇಷ್ಟೇ - ಮೈಸೂರಿನಲ್ಲಿ ಓದಿದವನು ನಾನು, ಕನ್ನಡ ಕನ್ನಡ ಕನ್ನಡಕ್ಕೆ ಮಾತ್ರ ಪ್ರಾಮುಖ್ಯತೆ ಆಗ ಎಲ್ಲಾ ಶಾಲೆಗಳಲ್ಲಿ ಇತ್ತು. ಐದನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೆ ಹಿಂದಿ ಭಾಷೆಯನ್ನು ನಾವು ಕಲಿಯಬೇಕಾಗಿದ್ದರೂ ಕೇವಲ 50 ಅಂಕಗಳಿಗೆ ಮಾತ್ರ ಪರೀಕ್ಷೆ. ಮತ್ತೇ,  ಪರೀಕ್ಷಕರು ತುಂಬಾ ಉದಾರವಾಗಿ ಅಂಕಗಳನ್ನು ಕೊಡುತ್ತಿದ್ದರು. ಎಲ್ಲ ಹುಡುಗರು ಹಿಂದಿ ಕಲಿಕೆಗೆ ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಉಪನ್ಯಾಸದ ಸಮಯದಲ್ಲಿ ಹುಡುಗರ ಗದ್ದಲವೋ ಗದ್ದಲ. ಆದರೂ ನಾನು ಜವಾಬ್ದಾರಿಯಿಂದ ಓದಿ ಹಿಂದಿಯಲ್ಲಿ ಸಣ್ಣ ವಾಕ್ಯಗಳನ್ನು ಬರೆಯಲು ಕೂಡ ಕಲಿತಿದ್ದೆನು. ಅಮಿತಾಬ್, ಧರ್ಮೇಂದ್ರ, ಜಿತೇಂದ್ರ, ರಾಜೇಶ್ ಖನ್ನಾ, ದೇವ್ ಆನಂದ್ ಅವರ  ಚಿತ್ರಗಳನ್ನು ಆಗಾಗ್ಗೆ ನೋಡುತ್ತಿದ್ದರಿಂದ ಸುಮಾರಾಗಿ ಹಿಂದಿ ಅರ್ಥವಾಗುತ್ತಿತ್ತು. ಆದರೆ ಹಿಂದಿಯಲ್ಲಿ ಮಾತನಾಡಲು ಬಹಳ ಕಷ್ಟಪಡಬೇಕಾಗಿತ್ತು. ಆ ದೊಡ್ಡ ಪಟ್ಟಣದಲ್ಲಿ ನನ್ನ ಜವಾಬ್ದಾರಿಯುತ ಕೆಲಸವನ್ನು ಹೇಗಪ್ಪ ನಿಭಾಯಿಸಬಲ್ಲೆ ಎಂಬ ಯೋಚನೆ ಮುಳ್ಳಿನಂತೆ ನನ್ನ ಹೃದಯವನ್ನು ಚುಚ್ಚುತ್ತಿತ್ತು.  

ನನ್ನ ಶಿಕ್ಷಣದ ಅವಧಿಯಲ್ಲಿ ಎಲ್ಲದರಲ್ಲೂ ತುಂಬಾ ಚುರುಕು ಎಂದು ಹೇಳಿಸಿಕೊಳ್ಳುತ್ತಿದ್ದ ನನಗೆ ಅದೇನೋ ಭಂಡ ಧೈರ್ಯ. ಹಿಡಿದ ಕಾರ್ಯವನ್ನು ಧೃತಿಗೆಡದೆ ಛಲದಿಂದ ಹಾಗೂ ಕಷ್ಟಪಟ್ಟು ನಿಭಾಯಿಸುವುದಂತಹ ಮನಸ್ಥಿತಿ ನನ್ನಲ್ಲಿ ಅಗಾಧವಾಗಿ ಬೇರೂರಿತ್ತು. ಹೊರಡಲು ಇನ್ನೂ ಒಂದು ತಿಂಗಳು ಸಮಯವಿದ್ದಿದ್ದರಿಂದ ಕೂಡಲೇ ಕಾರ್ಯಮಗ್ನನಾದೆ. ಲಷ್ಕರ್ ಮೊಹಲ್ಲೆಯ  ನಜರ್ಬಾದ್ ಬಡಾವಣೆಯಲ್ಲಿರುವ ನನ್ನ ಸ್ನೇಹಿತ ಅಸ್ಲಮ್ ಮನೆಗೆ ಹೋಗಿ ನನಗೆ ಹಿಂದಿಯಲ್ಲಿ ಮಾತನಾಡುವುದನ್ನು ಕಲಿಸಲು ಮೊರೆ ಹೋದೆ. ಅವನು ಒಪ್ಪಿ ದಿನವೂ ನನ್ನ ಹತ್ತಿರ ಹಿಂದಿಯಲ್ಲೇ ಮಾತನಾಡಿ ನನಗೂ ಹಿಂದಿಯಲ್ಲಿ ಮಾತನಾಡಲು ಹೇಳುತ್ತಿದ್ದನು. 

ನಾವಿಬ್ಬರು ಮೈಸೂರಿನ ಕುದುರೆ ಗಾಡಿಯಲ್ಲಿ (tonga) ಕುಳಿತುಕೊಂಡು ಮೈಸೂರು ನಗರದ ಅರಮನೆಯ ಸುತ್ತ ಪ್ರದಕ್ಷಿಣೆ ಮಾಡಲು ಪ್ರಾರಂಭಿಸಿದೆವು. ಟಾಂಗಾ ಗಾಡಿಯನ್ನು ಆಯ್ಕೆ ಮಾಡಿದ ಕಾರಣ ನನಗೆ ಹಿಂದಿ ಕಲಿಸಲು ಮತ್ತೊಬ್ಬನ ಅಗತ್ಯವಿತ್ತು. ಏಕೆಂದರೆ ಬೇರೆ ಇಬ್ಬರು ಹಿಂದಿಯಲ್ಲಿ ಮಾತನಾಡಿದಾಗ ನಾನು ಹೇಗೆ ಅವರ ಮಾತುಗಳನ್ನು ಅರ್ಥ ಮಾಡಿಕೊಳ್ಳಬಹುದು ಮತ್ತು ಮೈಸೂರಿನಲ್ಲಿರುವ ಎಲ್ಲ ಟಾಂಗಾ ಚಾಲಕರಿಗೆ ಹಿಂದಿ ಬರುತ್ತಿದ್ದದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆಂದು ಎಂದು ನಾನು ಭಾವಿಸುವೆ.  ಹಾಗೂ ಹೀಗೂ ಅಲ್ಪ ಸ್ವಲ್ಪ ಮೈಸೂರು ಟಾಂಗಾ ಹಿಂದಿ ಮಾತನಾಡಲು ಮೂವತ್ತು ದಿನಗಳಲ್ಲಿ ಕಲಿತೆನು.  

ಮುಂಬಯಿಗೆ ಬಂದದ್ದಾಯಿತು. ಕೆಲವು ದಿನಗಳಲ್ಲಿಯೇ ನನಗೆ ಈ ಜಗದ್ವ್ಯಾಪಿ (cosmopolitan) ನಗರದ ಜನರ ಹಿಂದಿ ಭಾಷಾ ಜ್ಞಾನದ ಅರಿವು  ಜ್ಞಾನೋದಯವಾಯಿತು. ಅಯ್ಯೋ ಕೂಡ ಎನಿಸಿತು. ಮೈಸೂರಿನ ಟಾಂಗಾ ಹಿಂದಿ ಭಾಷೆಯೇ ಎಷ್ಟೋ ಮೇಲು ಎಂದರ್ಥವಾಯಿತು. ಮುಂಬಯಿಯಲ್ಲಿ ಸ್ವಲ್ಪವೇ ಹಿಂದಿ ಶಬ್ಧಗಳು ಗೊತ್ತಿದ್ದರೆ ಸಾಕು, ಬೇರೆ ಭಾಷೆ ಮತ್ತು ಇಂಗ್ಲಿಷ್ ಭಾಷೆಯ ಶಬ್ದಗಳನ್ನು ಮಿಶ್ರಣ ಮಾಡಿ  ದಿನಗಳನ್ನು ಆರಾಮವಾಗಿ ಹಾಗೂ ನಿರ್ಭಯವಾಗಿ ನಿಭಾಯಿಸಬಹುದೆಂದು ಮನದಟ್ಟಾಯಿತು. 

ಆದರೂ ನಾನು ಛಲಬಿಡದೆ ಒಳ್ಳೆಯ ಹಿಂದಿ ಭಾಷೆಯನ್ನು ಮಾತನಾಡಲಿಕ್ಕೆ ಕಲಿಯಲೇ ಬೇಕೆಂದು ನಿರ್ಧಾರ ಮಾಡಿ ಮೊದಲು ನನ್ನ ಕಚೇರಿಯಲ್ಲಿನ ಬಿಹಾರಿ ಗೆಳೆಯನ ಜೊತೆಗೆ ಓಡಾಡಲು ತೊಡಗಿದೆ. ಆದರೆ ಕೆಲವೇ ದಿನಗಳಲ್ಲಿ ನನಗೆ ಬರುತ್ತಿದ್ದ कहता है,  दिखता है ಎನ್ನುವ ಶಬ್ದಗಳೆಲ್ಲ ಮರೆತು कहत है,  दिखत है ಎನ್ನುವ ಶಬ್ದಗಳು ತಲೆಯಲ್ಲೂರಿದವು. ಯಾಕೋ ಸರಿಯಿಲ್ಲವೆಂದು ಈ ಪಾಟ್ನಾ ಗೆಳೆಯನನ್ನು ಬಿಟ್ಟು ಅಲಹಾಬಾದ್ ನಿಂದ ಬಂದಂತಹ ಕರ್ಮಚಾರಿಯ ಗೆಳೆತನ ಮಾಡಿದೆ. Stationಗೆ  stopಗೆ इस्टेशन  इस्टाप ಅಂತೆಲ್ಲ ಶುರುವಾಗಿ ನನ್ನ ಹಿಂದಿಯ ಜೊತೆಗೆ ಇಂಗ್ಲೀಷೂ ಕೆಟ್ಟದಾಯಿತು. ಛೇ, ಇದು ಬೇಡಾ ಅಂತ ಪಕ್ಕದ ಕಚೇರಿಯ  ಗುಜರಾತಿಯವನ ಹತ್ತಿರ ಸ್ನೇಹ ಮಾಡಿ ಅವನ ಜೊತೆಗೆ ಮಸಾಲ ಚಾಯ್ ಕುಡಿಯುವ ನೆಪದಲ್ಲಿ ಬೋರಿವಲಿ ಕಾಂದಿವಲಿ ಬಡಾವಣೆಗಳನ್ನೆಲ್ಲ  ವಿಹಾರ ಮಾಡಿದೆ. ಗುಜರಾತಿಯವನೊಟ್ಟಿಗಿದ್ದ ಪರಿಣಾಮ बहन ಗೆ   बेन ಅಂತ   पीछे ಗೆ पीछू ಅಂತೆಲ್ಲ ಬಾಯಿಗೆ ಬಂದುಬಿಟ್ಟಿತು. ಅಯ್ಯೋ ಏನಿದು ನನ್ನ ದೌರ್ಭಾಗ್ಯ ವೆಂದೆನಿಸಿ ಕೊನೆಯ ಪ್ರಯತ್ನವೆಂದು ಒಬ್ಬ ಪಂಜಾಬಿಯ ಜೊತೆಗೆ ಸ್ನೇಹ ಮಾಡಿದೆ. पुत्तर, कुड़ी, सोण ಎಂದೆಲ್ಲ ಶಬ್ದಗಳ ಸುರಿಮಳೆಯಾಗಿ ಇದನ್ನೂ ಕೈಬಿಡಬೇಕಾಯ್ತು. ಇನ್ನು ಮರಾಠಿಯವನ ಜೊತೆ ಸ್ನೇಹದ ಪ್ರಶ್ನೆಯೇ ಬರಲಿಲ್ಲ, ಏಕೆಂದರೆ ಅವನು ಹಿಂದಿ ಮಾತನಾಡಲಿಕ್ಕೇ ತಯಾರು ಇರಲಿಲ್ಲ. ಮಲಯಾಳಿ, ಮದರಾಸಿ ಯವರನ್ನು ದೂರದಿಂದಲೇ ಗಮನಿಸಿ ನಾನೇ ವಾಸಿ ಎಂದು ತಿಳಿದು ಅವರ ಜೊತೆಗೆ ಹಿಂದಿ ಭಾಷೆಯಲ್ಲಿ ಮಾತನಾಡಲು ಹೋಗಲಿಲ್ಲ.  

ಏನಪ್ಪಾ ಮಾಡೋದು, ಹಿಂದಿ ಒಂದು ಒಳ್ಳೆಯ ಭಾಷೆ. ಅದನ್ನು ಸರಿಯಾಗಿ ಕಲಿಯಲೇ ಬೇಕು. ಹಿಂದಿಯಲ್ಲೇ  ಕಥೆ ಕವನ ಬರೆಯಲೇ ಬೇಕು ಎಂಬ ನನ್ನ ಮನೋಚ್ಛೆ ಹೆಚ್ಚಾಗುತ್ತಾ ಹೋಯಿತು.  

ಮೈಸೂರಿನ ದಕ್ಷಿಣ ಭಾರತ ಹಿಂದೀ ಪ್ರಚಾರ ಸಭೆಯೇ ಎಲ್ಲಕ್ಕಿಂತ BEST (ಮುಂಬಯಿಯ ಬಸ್ ಸಂಸ್ಥೆ ಅಲ್ಲ) ಎಂದು ಭಾವಿಸಿ ಮೈಸೂರಿನ ಸ್ನೇಹಿತನ ಮುಖಾಂತರ ಸಹಾಯ ಪಡೆದು ಹಿಂದಿ ಪ್ರಥಮ ಹಾಗೂ ಮಧ್ಯಮ ಪರೀಕ್ಷೆಗಳಲ್ಲಿ ತೇರ್ಗಡೆಯಾದೆ. ನಂತರ ಬಿಡುವಿನ ಸಮಯದಲ್ಲಿ ಕೆಲವು ಸಣ್ಣ ಪುಟ್ಟ ಕಥೆ, ಕವಿತೆಗಳನ್ನು ಕೂಡ ಬರೆದೆನು. ಇದೆಲ್ಲ ಮುಗಿಸುವ ಹೊತ್ತಿಗೆ ನನಗೆ ಹಾಸನಕ್ಕೆ ವರ್ಗವಾಯಿತು. ಎಲ್ಲಾ ಹಸ್ತಪ್ರತಿಗಳೊಂದಿಗೆ(manuscripts) ಹಾಸನಕ್ಕೆ ಬಂದು ನೆಲೆ ನಿಂತೆನು. ನನ್ನ ಹಿಂದಿ ಕಲಿತಿದ್ದರ ಅನುಭವ ನನ್ನ ಹಾಸನದ ಹೊಸ ಸ್ನೇಹಿತರಿಗೆಲ್ಲ ಹೇಳಿದಾಗ ಅವರೆಲ್ಲ ನಾನು ಬರೆದ ಕಥೆ ಕವಿತೆಗಳನ್ನು ಏಕೆ ಅಚ್ಚು ಹಾಕಿಸಿ ಪುಸ್ತಕದ ರೂಪದಲ್ಲಿ ತರಬಾರದು ಎಂಬುವ ಸಲಹೆ ಕೊಟ್ಟರು. ನನಗೂ ಸರಿ ಎನಿಸಿ ಕಾರ್ಯಮಗ್ನನಾದೆನು. ಆದರೆ ಒಂದು ವಿಷಯ ನನ್ನನ್ನು ಕಾಡುತ್ತಿತ್ತು, ಅದೇನೆಂದರೆ ಪುಸ್ತಕಕ್ಕೆ ಒಬ್ಬ ದೊಡ್ಡ ಹಾಗೂ ಮುಖ್ಯ ವ್ಯಕ್ತಿಯ ಮುನ್ನುಡಿ ಇದ್ದರೆ ನನ್ನ ಪುಸ್ತಕಕ್ಕೆ ಸ್ವಲ್ಪವಾದರೂ ಪ್ರಾಮುಖ್ಯತೆ ದೊರೆಯಬಹುದೇನೋ. 

ತಕ್ಷಣ ನನ್ನ ಮನದಲ್ಲಿಯ tubelight ಸ್ಪುರಣ (flash) ಮಿಂಚಿನಂತೆ ಕಾಣಿಸಿತು. ನಮ್ಮೂರಿನ ಮಾನ್ಯ ವಿಧಾನಸಭಾ ಸದಸ್ಯರಾದ ಗೌಡರಿಂದ ಒಂದು ಮುನ್ನುಡಿ ಬರೆಸಿದರೆ ಹೇಗೆ? ಮತ್ತೆ ಅವರು ಮೂರು ಬಾರಿ ಲೋಕಸಭೆಯಲ್ಲಿ ಗೆದ್ದು ಹದಿನೈದು ವರ್ಷ ದೇಹಲಿಯಲ್ಲೇ ಇದ್ದವರು. ಈಗ ರಾಜ್ಯ ರಾಜಕಾರಣವೇ ಉತ್ತಮ ಎಂದು ವಿಧಾನಸಭೆಯ ಸದಸ್ಯರಾಗಿದ್ದರು. ನನ್ನ ಸ್ನೇಹಿತನ-ಸ್ನೇಹಿತನ ತಂದೆಯವರೇ ಈ ವಿಧಾನಸಭಾ ಸದಸ್ಯರಾಗಿದ್ದರಿಂದ ಹಾಗೂ ಅವರ ಮನೆ ಹಾಸನದಲ್ಲೇ ಇದ್ದಿದ್ದರಿಂದ ಬರುವ ಶನಿವಾರದಂದು ಅವರ ಮನೆಗೆ ಹೋಗಲು ನನ್ನ ಸ್ನೇಹಿತನ ಸ್ನೇಹಿತನಿಗೆ ಬಲವಂತ ಮಾಡಿ ಒಪ್ಪಿಸಿದೆ. ಬಹಳ ಕಷ್ಟಪಟ್ಟು  ಭೇಟಿಗೆ ವ್ಯವಸ್ಥೆ (appointment) ತೆಗೆದುಕೊಂಡು ಅವರ ಮನೆಗೆ ರಾತ್ರಿ ಎಂಟರ ಹೊತ್ತಿಗೆ ಹೋದೆನು. ಮುನ್ನಡಿಯನ್ನು ಬರೆಯಲು ಗೌಡರು ಸಂತೋಷದಿಂದಲೇ ಒಪ್ಪಿದರು. "ನಮ್ಮ ಹಳ್ಳಿಯ ಭಾಷೆಯಲ್ಲಿ ಬೇಕೋ ಅಥವಾ ನಿಮ್ಮ ಮೈಸೂರು ಭಾಷೆ ಬೇಕೋ" ಎಂದಾಗ, ನಾನು ನಮ್ರತೆಯಿಂದ "ಇದು ನನ್ನ ಹಿಂದಿ ಕಥೆ, ಕವಿತೆಗಳು, ಆದ್ದರಿಂದ ತಾವುಗಳು ಹಿಂದಿಯಲ್ಲಿ ಬರೆದು ಕೊಡಬೇಕು" ಎಂದು  ಮನವಿ ಮಾಡಿದೆ. 

ಗೌಡರು ಕಿಡಿ ಕಾಡಿದರು, "ಆ ದಿಲ್ಲೀ ಭಾಷೆ ಬ್ಯಾಡ, ನೀನು ಕನ್ನಡದಲ್ಲೇ ಕಥೆ, ಕವನ ಬರೀ" ಎಂದು ನನಗೆ ಸಲಹೆ ನೀಡಿದರು. "ಸಾರ್, ಛಲದಿಂದ  ಹಿಂದಿ ಭಾಷೆಯಲ್ಲಿ ಬರೆದಿದ್ದೇನೆ, ನಿಮ್ಮ ಮುನ್ನಡಿಯಿದ್ದರೆ ನನ್ನ ಪುಸ್ತಕಗಳೆಲ್ಲ ಸುಲಭವಾಗಿ ದೇಶದ ಎಲ್ಲಾ ಲೈಬ್ರರಿಗಳಿಗೆ ವೇಗವಾಗಿ ಕಳಿಸಿ ಸ್ವಲ್ಪ ಹಣ ಗಳಿಸಬಹುದು.  ನಿಮ್ಮ ಮುನ್ನಡಿಯಿಲ್ಲದಿದ್ದರೆ ಪುಸ್ತಕ ಮಾರಾಟದ ಪ್ರಶ್ನೆಯಿರಲಿ, ಯಾವ ಸರ್ಕಾರಿ ಲೈಬ್ರರಿ ಮತ್ತು ಕಚೇರಿ ಕೂಡ ಬೆಲೆ ಕೊಡುವುದಿಲ್ಲ" ಎಂದು ಗೋಗರೆದೆ.  

ಕೊನೆಗೂ ನನ್ನ ಮೇಲೆ ಕನಿಕರ ತೋರಿ, ತಾವು ಹೇಳುತ್ತಾ ಹೋದಂತೆ ಬರೆದುಕೊಳ್ಳಲು ತಿಳಿಸಿದರು. ಸಂತೋಷದಿಂದ ಪುಸ್ತಕ, ಲೇಖನಿ ಸಿದ್ಧ ಪಡಿಸಿಕೊಂಡೆ. ಮತ್ತೇ ಹಳ್ಳಿ-ಕನ್ನಡ ಭಾಷೆಯಲ್ಲೇ ಪ್ರಾರಂಭಿಸಿದಾಗ, ಸಾರ್ ಹಿಂದಿಯಲ್ಲಿ ಅಂತ ಸುಳಿವು ಕೊಟ್ಟು ಪೆಚ್ಚು ಮೊರೆ ಹಾಕಿದೆ. "ಏನಯ್ಯ ನನ್ನ ಹಿಂದಿನದನ್ನು ನೆನಪಿಸುತ್ತಾ ಹಿಂದೀ ಹಿಂದೀ ಅಂತಿದ್ದೀಯಲ್ಲ" ಎಂದು ಗೌಡರು ಬೈದರು. ಬಹುಷಃ ಅವರ ಹಿಂದಿನ ಹಿಂದೀ ಕಹಿ ಅನುಭವ ಅವರ ತಲೆಕೆಡಿಸಿರಬಹುದು.  

ಹಿಂದೆ ಹದಿನೈದು ವರ್ಷ ಹಿಂದೀ ಜಾಗದಲ್ಲಿ ಇದ್ದು ಹಿಂದೀ ಬರದ ಗೌಡರು "ನೀನೇ ಉಪಾಯ ಸೂಚಿಸು" ಎಂದು ನನಗೇ ಹೇಳಿದರು. "ಹಾಳಾದ್ದು ಈ  tube light flash ಈ ಸಲ ಮಿಂಚಿನಂತೆ ಬರುತ್ತಾನೇ ಇಲ್ಲವಲ್ಲ" ನನ್ನನ್ನೇ ನಾನು ಶಪಿಸತೊಡಗಿದೆ.

ಸೊಪ್ಪಿನ ಸಾರು, ಎರಡು ಮುದ್ದೆ ಹಾಗೂ ಒಂದು cup ಕಾಫಿ ಬಂದವು.  ಹಸಿವಿನಿಂದ ಕಂಗೆಟ್ಟಿದ್ದ ನನಗೆ ಮುದ್ದೆ ತಿಂದ ಮೇಲಾದರೂ ಏನಾದರೂ ಹೊಳೆಯಬಹುದೆಂದು ತಟ್ಟೆಯನ್ನೇ ನೋಡುತ್ತ ಸಂಜ್ಞೆ (signal)ಗಾಗಿ ಕಾದೆ. ಇನ್ನೇನು, ತಟ್ಟೆಗೆ ನಾನು ಕೈ ಹಾಕಬೇಕು, ಅಷ್ಟರಲ್ಲಿ ಗೌಡರು ನನಗೆ ಕಾಫಿ ತಗೊಳ್ಳಿ ಎಂದು ಹೇಳಿ ಮುದ್ದೆ ತಟ್ಟೆಯನ್ನು ತಮ್ಮ ಕೈಗೆತ್ತಿಕೊಂಡರು.  

ಇಲ್ಲಿಗೆ ಮುದ್ದೆ ತಿನ್ನಲು ಬಂದಿಲ್ಲವೆಂದು ನನ್ನನ್ನೇ ನಾನು ಸಂತೈಸಿಕೊಂಡು ಮುನ್ನುಡಿಯ ಉಪಾಯಕ್ಕೆ ಯೋಚನಾಮಗ್ನನಾದೆನು. ಗೌಡರು 'ಸೋರ್' ಎಂದು ಸೊಪ್ಪಿನ ಸಾರನ್ನು ಹೀರುತ್ತಿದ್ದಾಗ 'ಆಹಾ! ಹೊಳೀತು Eureka'. ಗೌಡರಿಗೆ ಹೇಳಿದೆ. "ನೀವು ಮುನ್ನುಡಿಯನ್ನು ಕನ್ನಡದಲ್ಲೇ ಹೇಳುತ್ತಾ ಹೋಗಿ ನಾನು ಬರೆದುಕೊಳ್ಳುವೆ" ಎಂದಾಗ  ಅವರು "ಇದು ನೋಡು ಕನ್ನಡದ ಮೇಲಿನ ಅಭಿಮಾನ" ಎನ್ನುತ್ತಾ ಮುನ್ನುಡಿಯನ್ನು ಹೇಳುತ್ತಾ ಹೋದರು, ನಾನು ಅವರು ಹೇಳಿದ್ದನ್ನೇ ಅಂದರೆ ಕನ್ನಡದ ಮುನ್ನುಡಿಯನ್ನು ಹಿಂದಿ  ಲಿಪಿಯಲ್ಲಿ ಬರೆಯುತ್ತಾ ಹೋದೆ.

ಪುಸ್ತಕವೂ ಪ್ರಕಟವಾಯಿತು, ಪುಸ್ತಕದ ಕೊನೆಯ ಪುಟದಲ್ಲಿ ಈ ಮುನ್ನಡಿಯ ಹಿಂದಿ ಅನುವಾದವನ್ನು ಕನ್ನಡದ ಲಿಪಿಯಲ್ಲಿ ಬರೆದು ಮುಂದೆ ಯಾವುದಾದರೂ ಒಂದು ದಿನ ಗೌಡರ ಸಹಾಯಕ್ಕೆ ಬರಬಹುದೆಂದು ಬಯಸಿದೆ.
***
end- elloo ನಡೆದದ್ದು ಅಲ್ಲ imagination written sometime ಇನ್ 2002
.


go back to... 
    click--> LINKS TO ARTICLES 

...

No comments:

Post a Comment