Showing posts with label nenapu- TYRE or TIRE? CHAPPALI ಟೈರ್ ಚಪ್ಪಲಿ slippers 🤔😀. Show all posts
Showing posts with label nenapu- TYRE or TIRE? CHAPPALI ಟೈರ್ ಚಪ್ಪಲಿ slippers 🤔😀. Show all posts

Sunday, 30 August 2020

TYRE or TIRE? CHAPPALI ಟೈರ್ ಚಪ್ಪಲಿ slippers 🤔😀

 


ನೆನಪು 
ಆರ್. ಗಣೇಶಪ್ರಸಾದ್ ಇಂದಿಗೂ ನನ್ನ ಆತ್ಮೀಯ ಸ್ನೇಹಿತನಾಗಿದ್ದಾನೆ. ಗಣೇಶ ನನ್ನ ಜೊತೆ ಐದನೆಯ ತರಗತಿಯಿಂದ ಓದುತ್ತಿದ್ದರೂ ಯಾಕೋ ಅವನ ಹತ್ತಿರ ಮಾತೇ ಆಡುತ್ತಿರಲಿಲ್ಲ. ಕಾರಣ ಕೂಡ ನೆನಪಿಲ್ಲ. ನಾವಿಬ್ಬರೂ ಎಂಟನೆಯ ತರಗತಿಗೆ ಮತ್ತೆ 1969ರಲ್ಲಿ ಒಂದೇ ಶಾಲೆಗೆ ಸೇರಿದೆವು. ಅದು ಹುಡುಗರ ಶಾಲೆ. ಹೈಸ್ಕೂಲಿನಲ್ಲಿ ನಾನು ಕುಳಿತುಕೊಳ್ಳುತ್ತಿದ್ದ ಬೆಂಚಿನ ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದನು. ಇವನ ಬೆಂಚಿನ ಉಳಿದ ಸಹಪಾಠಿಗಳು ನಾವಿಬ್ಬರೂ ಮಾತನಾಡದ ವಿಷಯ ತಿಳಿದು, ನಮ್ಮಿಬ್ಬರನ್ನು ಸೇರಿಸುವ ಪ್ರಯತ್ನದಲ್ಲಿ, ನಮ್ಮಿಬ್ಬರಿಗೂ ಕೈಕುಲುಕಿಸಿದ್ದರು. ಅವತ್ತಿನಿಂದ ನಾವಿಬ್ಬರೂ ಒಟ್ಟಿಗೇ ಸ್ಕೂಲಿನಿಂದ ಮನೆಗೆ ಬರುತ್ತಿದ್ದೆವು. ನನ್ನ ಮನೆ ಸಿಗುವ ಮುಂಚೆ ಅವನ ಮನೆ ಸಿಗುತ್ತಿತ್ತು.

ಒಂದೆರಡು ದಿನದ ನಂತರ ನಾವಿಬ್ಬರೂ ಸಂಜೆಯ ಹೊತ್ತಿನಲ್ಲಿ ಮಾರುಕಟ್ಟೆಯ ಕಡೆಗೆ ಹೋಗಿ ತಿರುಗಾಡಿ ಬರಲು ಗಣೇಶ ನನ್ನನ್ನು ಆಮಂತ್ರಿಸಿದ. ಮುಖ್ಯ ಮಾರುಕಟ್ಟೆ ನನ್ನ ಮನೆಯಿಂದ ಸುಮಾರು ಎರಡೂವರೆ ಕಿಲೋಮೀಟರ್ ದೂರದಲ್ಲಿದೆ. ಎಷ್ಟು ಹೊತ್ತಿಗೆ ಹೊರಡುವುದು ಎಂದು ಶಾಲೆಯಲ್ಲಿಯೇ ನಿರ್ಧರಿಸಿ, ಸಂಜೆ ಮಾರುಕಟ್ಟೆಗೆ ಹೋಗಲು ಒಪ್ಪಿಕೊಳ್ಳುತ್ತಿದ್ದೆವು. ಅಂದಿನಿಂದ ನಮ್ಮಿಬ್ಬರ ಸಾಯಂಕಾಲದ ವಾಕಿಂಗ್ ಪ್ರಾರಂಭವಾಯಿತು.

ಶಾಲೆಯಿಂದ ಮನೆಗೆ ಬಂದಮೇಲೆ ಮುಖ ತೊಳೆದು ಬಟ್ಟೆ ಬದಲಾಯಿಸಿ ನಾನು ಪ್ರತಿದಿನ ಗಣೇಶನ ಮನೆಗೆ ಸಂಜೆ ಹೋಗುವುದು. "ಗಣೇಶಾ" ಅಂತ ಕರೆದಾಗ "ಬಂದೆ" ಎಂದು ಹೇಳಿ ಹೊರಗೆ ಬರುತ್ತಿದ್ದನು. ಅವನು ಹೊರಡಲು ಸಿದ್ಧವಾಗಿಲ್ಲದಿದ್ದರೆ ಅವನ ತಾಯಿ ನನ್ನನ್ನು ಮನೆಯ ಒಳಗೆ ಕರೆದು ಕೂಡಿಸುತ್ತಿದ್ದರು. ಎಲ್ಲ ಮನೆಗಳಲ್ಲಿ ಇರುವ ಹಾಗೆ ಅವರ ಅಮ್ಮ ನನ್ನ ಬಗ್ಗೆ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಎಲ್ಲಿ ಓದುತ್ತೇನೆ, ಏನು ಮಾಡುತ್ತೇನೆ ಎಂಬಿತ್ಯಾದಿ. ಇವನು ಸಿದ್ದವಾಗಿ ಬಂದ ಮೇಲೆ ನಾವಿಬ್ಬರೂ ತಿರುಗಾಡಲು ಪ್ರಾರಂಭಿಸುತ್ತಿದ್ದೆವು.

ಒಂದೆರೆಡು ಬಾರಿ ಗಣೇಶನ ಆಪ್ತ ಸ್ನೇಹಿತರಾದ ಅನಂತಶಯನ ಮತ್ತು ರಾಜಶೇಖರ ನಮ್ಮ ಜೊತೆ ಬಂದಿರುವುದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ರಾಜಶೇಖರ ನಮ್ಮ ಮನೆಯ ಹತ್ತಿರವೇ ಇರುವುದರಿಂದ ಆಗಾಗ್ಗೆ ನನಗೆ ಸಿಗುತ್ತಲೇ ಇರುತ್ತಾನೆ. ಅನಂತಶಯನ ಬೆಂಗಳೂರಿನಲ್ಲಿ ಇದ್ದಾನೆ.

ಇನ್ನು ಸಂಜೆಯ ವಾಕಿಂಗ್ ವಿಷಯ. ಸುಮ್ಮನೆ ನಡೆದುಕೊಂಡು ಸಿಟಿ ಕಡೆಗೆ ಹೋಗುವುದು. ಎಲ್ಲಿಗೆ ಎನ್ನುವ ಗುರಿಯಿರಲಿಲ್ಲ. ಹೊಸ ಹೊಸ ರಸ್ತೆಗಳನ್ನು ಅನ್ವೇಷಿಸುತ್ತಾ, ಸುತ್ತಮುತ್ತಲಿನ ಮನೆಗಳು, ಅಂಗಡಿಗಳನ್ನು ನೋಡುತ್ತಾ ಹೋಗುತ್ತಿದ್ದೆವು. ನಾವಿಬ್ಬರೂ ಪ್ರತಿದಿನವೂ ಹೀಗೆ ಸುಮ್ಮನೆ ತಿರುಗಾಡುವುದು. ಶಾಲೆಯ ವಿಷಯ, ಸ್ನೇಹಿತರ ಬಗ್ಗೆ ಗಣೇಶ ನನ್ನ ಹತ್ತಿರ ಹೇಳುತ್ತಿದ್ದ. ಅವನಿಗೆ ಇಷ್ಟವಾದ ವಿಷಯಗಳು, ಇಷ್ಟವಾಗದ ವಿಷಯಗಳು ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದ. ಏನೂ ಕೆಲಸ ಇಲ್ಲಾ, ಸುಮ್ಮನೇ ನಡೆಯುತ್ತಾ ಹೋಗುವುದು. ನೆನಸಿಕೊಂಡರೆ ಈಗಲೂ ನಗು ಬರುತ್ತದೆ.

ನಾವಿಬ್ಬರು ಹೋಗುತ್ತಿರುವ ದಾರಿಯಲ್ಲಿ ಅಂದರೆ ಗಾಯತ್ರಿ ಟಾಕೀಸ್ ಪಕ್ಕದಲ್ಲಿ ಇರುವ ಒಂದು ಚಪ್ಪಲಿ ಅಂಗಡಿ ತೋರಿಸಿ ಗಣೇಶ ತಾನು ಹಾಕಿಕೊಂಡಿರುವ ಚಪ್ಪಲಿಯನ್ನು ತೋರಿಸುತ್ತಿದ್ದನು. ಮತ್ತೆ ಬಹಳ ಕಡಿಮೆ ಬೆಲೆ ಅಂತಾ ಹೇಳುತ್ತಾ, ಅವನ ಚಪ್ಪಲಿಯ ಗುಣಮಟ್ಟದ ಬಗ್ಗೆ ಬಹಳ ಹೆಮ್ಮೆಯಿಂದ ಹೇಳುತ್ತಿದ್ದನು. ಇವನೇ ಆ ಅಂಗಡಿಯ ಮಾರಾಟಗಾರನ ತರಹ. ಇನ್ನು ಇವನ ಜೊತೆಗೆ ದಿನಾಲು ಸಿಟಿ ತನಕ ನಡೆದು ಹೋಗಬೇಕು. ಹಾಗಾಗಿ ಚಪ್ಪಲಿ ಗಟ್ಟಿ ಇರಬೇಕು ಅನ್ನೋ ಯೋಚನೆ ನನಗಾಗಲೇ ಮನದಲ್ಲಿ ಮೂಡಿತ್ತು. ಗಣೇಶನ ಮಾತುಗಳನ್ನು ಕೇಳಿ ನಾನೂ ಆ ಚಪ್ಪಲಿಯನ್ನು ಕೊಳ್ಳಬೇಕೆಂದು ನಿರ್ಧರಿಸಿದೆ. ಇವನ ಮಾರಾಟಗಾರರಿಕೆಯಿಂದ (salesmanship) ಕೂಡ ನಾನೂ ಪ್ರಭಾವಿತನಾಗಿದ್ದೆನು.

ಅಂತೂ ಒಂದು ದಿನ ಗಟ್ಟಿ ಮನಸ್ಸು ಮಾಡಿ ಒಂದು ಜೊತೆ ಟೈರ್ ಚಪ್ಪಲಿಯನ್ನು ಕೊಂಡಿದ್ದೂ ಆಯಿತು. ಬಹಳ ಖುಷಿಯಿಂದಲೇ ಮನೆಗೆ ಬಂದೆ. ಮಾರನೆಯ ದಿನ ಹೊಸ ಚಪ್ಪಲಿ ಹಾಕಿ ಶಾಲೆಗೆ ಹೋದೆ. ಆದರೆ ಯಾಕೋ ಚಪ್ಪಲಿ ಹಾಕಿಕೊಂಡಾಗ ಕಾಲು ತುಂಬಾ ಭಾರ ಅಂತ ಅನ್ನಿಸುತ್ತಾ ಇತ್ತು. ಗಣೇಶನನ್ನು ನೋಡಿ ನನ್ನ ಸಮಸ್ಯೆಯನ್ನು ಹಂಚಿಕೊಂಡೆ. ಅದಕ್ಕೆ ಅವನು "ಯೋಚನೆ ಮಾಡಬೇಡ ಅಭ್ಯಾಸದ ಅವಶ್ಯಕತೆ ಇದೆ ಅಷ್ಟೇ. ನೋಡು ನಾನು ಯಾವಾಗ್ಲೂ ಅದೇ ಚಪ್ಪಲಿ ಹಾಕ್ಕೊಳ್ಳೋದು" ಅಂತ ಸಾಂತ್ವನ ಮಾಡಿದ್ದ ನೆನಪು ನನಗಿದೆ.  

ಆ ಚಪ್ಪಲಿ ಹಾಕೊಂಡಾಗ ಗಣೇಶನ ಸಾಂತ್ವನವೇ ನೆನಪಿಸಿಕೊಂಡು ಕಾಲು ಭಾರವಾದರೂ ನಡೆಯುತ್ತಿದ್ದೆನು. ಅವನ ಮಾತುಗಳನ್ನು ಮನದಲ್ಲಿಟ್ಟುಕೊಂಡು, ಧೈರ್ಯವಾಗಿ ನಡೆಯುತ್ತಿದ್ದೆ. ದಿನಗಳೆದಂತೆ ಚಪ್ಪಲಿ ಕಾಲಿಗೆ ಹೊಂದಿಕೊಂಡು ಬಿಟ್ಟಿತು. ನನಗೆ ಮುಂದಿನ ಮೂರುನಾಲ್ಕು ವರ್ಷ ಬೇರೆ ಚಪ್ಪಲಿ ಕೊಂಡುಕೊಳ್ಳೋದು ಸಹ ನಿಂತುಹೋಯಿತು. ಗಣೇಶ ವಿಜ್ಞಾನ ವಿಭಾಗ ಆರಿಸಿಕೊಂಡು PUC ಸೇರಿ ನನ್ನ ಜೊತೆ ತಪ್ಪಿದರೂ ಅವನ ಶಿಫಾರಸಿನ ಚಪ್ಪಲಿ ಮಾತ್ರ ನನ್ನ ಜೊತೆ ಬಿಡಲಿಲ್ಲ ಮತ್ತು ಸವೆಯಲೇ ಇಲ್ಲ.
***
end- written ಸಂಟೈಂ ಇನ್ August 2020

.


go back to... 
    click--> LINKS TO ARTICLES 

...