Imaginative write-up
ಪ್ರಹಸನ VRS ನ ಚಕ್ಕರ್ vrs na chakkar
ಪಾತ್ರಗಳು
1. ಗಂಡ ವಯಸ್ಸು 55
2. ಹೆಂಡತಿ ವಯಸ್ಸು 52
3. ಆಗಂತುಕ ವಯಸ್ಸು 57
4. ಅಪರಿಚಿತೆ ವಯಸ್ಸು 53
ಗಂಡ: ಏನೇ ಕೇಳಿಸ್ತಾ, ಎಲ್ಲಿಟ್ಟಿದ್ದೀಯ ನನ್ನ ಕನ್ನಡಕನಾ ?
ಹೆಂಡತಿ: ಕಸದ್ ಡಬ್ಬೀಲೀ.
ಗಂಡ: ಯಾಕೆ ಹೀಗೆ ಮಾತಾಡ್ತೀಯಾ, ಸ್ವಲ್ಪ ಸಹಾಯ ಮಾಡೇ ನನ್ನ ಕನ್ನಡಕ ಹುಡ್ಕೋದಿಕ್ಕೆ.
ಹೆಂಡತಿ: ಅಯ್ಯೋ ಕನ್ನಡಕ ಹಾಳಾಗಿ ಹೋಗ್ಲಿ ನಿಮ್ಮ ಕಾಟ ಜಾಸ್ತಿಯಾಯ್ತು.
ಗಂಡ: ಹೌದು ನಾನು VRSನ ತೊಗೊಂಡಾಗಿನಿಂದ ನೀನು ಹೀಗೆ ನನ್ನ ಹೀಯಾಳಸ್ತಾ ಇರ್ತೀದೀಯ.
ಹೆಂಡತಿ: ಇನ್ನೇನು ಮತ್ತೆ. ನಿಮಗೆ ಬೇರೆ ಕೆಲ್ಸ ಇದ್ದರೆ ತಾನೇ ? ಅದೆಲ್ ಹೋಯ್ತು ಅದನ್ಯಾಕೆ ಹೀಗೆ ಮಾಡ್ದೆ, ದುಡ್ಡು ಹೆಚ್ಚು ಖರ್ಚು ಮಾಡ್ತಿದ್ದೀಯ, ಹೀಗೆಲ್ಲ ಯಾವಾಗ ನೋಡಿದ್ರೂ ಆಫೀಸ್ನಲ್ಲಿದ್ದ supervise ಕೆಲ್ಸನಾ ಮನೆಯಲ್ಲೇ ಪ್ರಾರಂಭಿಸಿದ್ದೀರಲ್ಲಾ - ಅದಕ್ಕೆ.
ಗಂಡ: ನನ್ನ ಹಣೇ ಬರಹ. vrs ತೊಗೊಂಡಾಗಿನಿಂದ ಯಾರೂ ನನಗೆ ಬೆಲೆನೇ ಕೊಡೋದಿಲ್ಲ. ನೀನೋ ಹೀಗೆ. ಇನ್ನು ನನ್ನ ಮಗನಾದ್ರೋ ಮಾತಾಡದನ್ನೇ ನಿಲ್ಲಿಸಿದ್ದಾನೆ.
ಹೆಂಡತಿ: ಇನ್ನೇನು ಮತ್ತೆ, ಅವನ ಸ್ನೇಹಿತರ ಹತ್ತಿರ ನಮ್ಮಪ್ಪ ಎಲ್ಲೂ ಕೆಲ್ಸಾನೇ ಮಾಡೋಲ್ಲಾಂತ ಹೇಳೋದಿಕ್ಕೆ ನಾಚ್ಕೆ ಆಗಿ ಮರ್ಯಾದೆ ಹೋದ ತರಹ ಆಗುತ್ತಲ್ಲ . ಅದಕ್ಕೆ ಹಾಗೆ.
ಗಂಡ: ಅಷ್ಟೇನೋ ಅಥವಾ ಇನ್ನೇನಾದ್ರು ಇದೆಯೋ ?
ಹೆಂಡತಿ: ಅವನ ಸ್ನೇಹಿತರೆಲ್ಲ ಅವರ ತಂದೆ ಇಂತಹ ದೊಡ್ಡ ಕೆಲಸದಲ್ಲಿ ಇದ್ದಾರೆಂತ ಜಂಭ ಕೊಚ್ಕೋತಾರಂತೆ ಮತ್ತು ಶ್ರೀಮಂತರಂತೆ.
ಗಂಡ: ನಂಗೂ ಕೂಡ ಕೆಲ್ಸ ಇಲ್ದೇ ಇದ್ದರೇನೆಂತೆ ಈಗ ದೊಡ್ಡ ಕೆಲ್ಸದಿಂದ ತಾನೇ vrs ತಗೊಂಡಿರೋದು. ನಮ್ಗೂ ಕಾರು ಇದೆಯಲ್ಲ ಡ್ರೈವರ್, ಆಳು, ಕಾಳು ಎಲ್ಲಾ ಇದ್ದಾರಲ್ಲ. ಹಾಗೇನೇ ನಾಳೆ ಬೇರೆ ಇವನ್ನ ನೋಡೋಕೆ ಮೂರ್ತಿಯವರು ಬರ್ತಾ ಇದ್ದಾರಲ್ಲ. ಒಬ್ಬಳೇ ಮಗಳು ಅವರಿಗೆ, ತುಂಬಾ ಶ್ರೀಮಂತರು ಬೇರೆ.
ಹೆಂಡತಿ: ನೀವೆನ್ ವಟ್ ವಟಾಂತ ಕಪ್ಪೆ ತರಹ ವಟಗುಟ್ಟಿದ್ರೂ ನಿಮ್ಗೆ ಕೆಲ್ಸ ಮಾತ್ರ ಇಲ್ಲವಲ್ಲ.
ಗಂಡ: ಹೋಗ್ಲಿ ಬಿಡು ಯಾಕೆ ಸುಂಸುಮ್ನೇ ಹಿಯಾಳಿಸ್ತೀಯ. ಅಲ್ಲಾ... ಈಗ ನನ್ನ ನೋಡಿದ್ರೆ ಆ ಡ್ರೈವರ್ ಕೂಡ ಮೀಸೆ ತಿರುವುತಾನಲ್ಲಂತ.
ಹೆಂಡತಿ: ಇನ್ನೇನು ಮತ್ತೆ, ನಿಮ್ಮಿಂದ ಒಂದು ಪೈಸೆ extra ಸಿಗೋಲ್ಲವಲ್ಲ ಅವನಿಗೆ.
ಗಂಡ: ಏನ್ಮಾಡ್ಲಿ ನಂಗೆ ಬರ್ತಿದ್ದ extra ಈಗ ನಿಂತೋಗಿದೆಯಲ್ಲ.
ಹೆಂಡತಿ: ಅದಿರಲಿ extra ಅಂದ್ ಕೂಡ್ಲೇ ನೆನಪಾಯ್ತು. ನಿಮಗೊತ್ತಾ, ನಿಮ್ಮ ಜೊತೆಯಲ್ಲೇ ಕೆಲ್ಸ ಮಾಡ್ತಿದ್ದರಲ್ಲ ರಾಮಸ್ವಾಮಿಯವರು, ಅದೇ ಎದುರುಗಡೆ ಲೈನಿನಲ್ಲಿ ಕೊನೆಯ ಮನೆ. ಅವರ ಮನಗೆ CBI ರೇಡ್ ಮಾಡಿದ್ದಾರಂತೆ, ಇಂದು ಬೆಳಿಗ್ಗೆ ಕೆಲ್ಸದವಳು ಹೇಳ್ತಾ ಇದ್ಲು. ಬೆಳಿಗ್ಗೆಯಿಂದ ಯಾರನ್ನೂ ಒಳಗೆ ಬಿಡ್ತಾ ಇಲ್ಲವಂತೆ.
ಗಂಡ: ಅಯ್ಯೋ ಹೌದಾ, ಅಲ್ವೇ ಮುಂಚೆನೇ ಯಾಕೆ ನಂಗೆ ಹೇಳಲಿಲ್ಲ. ನಮ್ಮನೆಗೂ ಬಂದ್ರೆ ಏನೇ ಮಾಡೋದು ?
ಹೆಂಡತಿ: ಮತ್ತೇ ನೀವೇ ಹೇಳ್ತಿದ್ದರಲ್ಲ ಎಲ್ಲಾ ರೇಕಾರ್ಡ್ಸ್ ಸುಟ್ಟು ಹಾಕಿದ್ದೀನಂತ.
ಗಂಡ: ಅದೇನೋ ಸರಿ. ಆದ್ರೆ ಮನೆಗೆ ಬಂದು ಚೆಕ್ ಮಾಡಿದ್ರೆ ಸಿಕ್ಕಿ ಬೀಳ್ತಿವಲ್ಲೇ.
ಹೆಂಡತಿ: ಹಾಗಾದ್ರೆ.. ಏನ್ರೀ ಮಾಡೋದು ಈಗ ?
ಗಂಡ: ಅವರೇನಾದ್ರೂ ಬಂದ್ರೆ ನಾನು ಖಾಯಿಲೆಯಿಂದ ಬಳಲುತ್ತಾ ಮಲ್ಗಿದ್ದೇನೆ ಎಂದು ಹೇಳಿ ಬಿಡು. ನೀನೇ ಎಲ್ಲಾದಕ್ಕೂ ಉತ್ತರ ಕೊಟ್ಟು ವಾಪಸ್ ಕಳಿಸಿಬಿಡು. ತುಂಬಾ ಬಡವರೂ ಅಂತಾನೂ ಹೇಳೋದು ಮರೀಬೇಡ.
ಹೆಂಡತಿ: ಆಯ್ತು ರೀ, ಅವರು ಬಂದ್ರೆ ತಾನೇ ಇದೆಲ್ಲಾ.
(ಬಾಗಿಲು ಟಿಕ್ ಟಿಕ್)
ಗಂಡ: ಅಯ್ಯೋ ಯಾರೋ ಬಂದ್ರು. CBIನವರೇ ಇರಬಹುದು. ಕಿಂಡಿಯಿಂದ ನೋಡೇ ಯಾರೂಂತ.
ಹೆಂಡತಿ: (ಹೋಗಿ ಬಂದು) ರೀ ನಿಮ್ಮಷ್ಟೇ ವಯಸ್ಸಾದ ಒಬ್ಬ ಗಂಡಸರು ಮತ್ತು ನನ್ನಷ್ಟೇ.... ಇಲ್ಲ.. ನನಗಿಂತ ಸ್ವಲ್ಪ ಜಾಸ್ತಿ ವಯಸ್ಸಾದ ಒಬ್ಬ ಹೆಂಗಸು ನಿಂತಿದ್ದಾರೆ.
ಗಂಡ: ಅಯ್ಯೋ ಏನೇ ಮಾಡೋದು ಈಗ ? ಈ CBIನೋರು ಇತ್ತೀಚೆಗೆ ಹೆಂಗಸರನ್ನೂ ಕೂಡ ಕರೆದು ಕೊಂಡು ಬರ್ತಾರೆ. ಯಾಕೆಂದ್ರೆ ನಿನ್ನಂತಹ ಪೆದ್ದ ಹೆಂಗಸರ ಹತ್ತಿರ ಬಾಯಿ ಬಿಡಿಸಬಹುದಾಂತ. ನಾನು ಒಳಗೆ ಹೋಗ್ತೀನೀ. ನಂಗೆ ಖಾಯಿಲೆ ಅಂತ ಹೇಳು. ಲೇ cash ವಿಶಯ, ಮನೆಯಲ್ಲಿರೋದ್ ಚಿನ್ನದ್ ಹಾಗೂ ಬೆಳ್ಳೀದು ವಿಶಯ ಬಾಯ್ ಬಿಟ್ಟೀಯ ಮತ್ತೇ. (ಒಳಗೆ ಹೋಗುವನು)
ಹೆಂಡತಿ: (ಬಾಗಿಲು ತೆರೆದು) ಬನ್ನಿ ಒಳಗೆ.
ಆಗಂತುಕ: ಎಲ್ಲಿ ಜೋಶಿ ಸಾಹೇಬರು ಎಲ್ಲಿದ್ದಾರೆ ಕರೆಯಿರಿ.
ಹೆಂಡತಿ: ಆಹ್ ಆಹ್.. ಅಂದ್ ಹಾಗೆ ಅವರಿಗೆ ತುಂಬಾ ಖಾಯಿಲೆ, ಮಲಗಿದ್ದಾರೆ, ಏಳೋಕೆ ಆಗಲ್ಲ.
ಆಗಂತುಕ: ಯಾಕೆ ಡಾಕ್ಟರ್ ಗೆ ತೋರಿಸಲಿಲ್ವಾ.
ಹೆಂಡತಿ: ಅಯ್ಯೋ ಡಾಕ್ಟರ್ ಹತ್ತಿರ ಹೋಗೋಕೆ ಎಲ್ಲಿದೆ ಹಣ ?
ಆಗಂತುಕ: ಇಂತಹ ದೊಡ್ಡ ಬಂಗಲೆಯಲ್ಲಿದ್ದೀರಾ. ಮೇಲಾಗಿ ಕಾರು, ಮೋಟಾರ್ ಸೈಕಲ್ ಎರಡು, 64 ಇಂಚಿನ TV ಎಲ್ಲಾ ಕಾಣಿಸ್ತಿದೆಯಲ್ಲ ?
ಹೆಂಡತಿ: ಅಯ್ಯೋ ಇದು.. ಈ ಮನೇ ನಮ್ದಲ್ಲ. ಅವರ ದೊಡ್ಡಪ್ಪನವರದು. ಕಾರು ಮೋಟಾರ್ ಸೈಕಲ್ ಎಲ್ಲಾ ಅವರದ್ದೇ.
ಅಪರಿಚಿತೆ: ಯಾವುದೂ ನಿಮ್ದಲ್ವಾ ?
ಆಗಂತುಕ: (ಅಪರಿಚಿತೆ ಕಡೆ ತಿರುಗಿ) ನೀನೇ ವಿಚಾರಿಸು.
ಹೆಂಡತಿ: ಅಯ್ಯೋ ಸಂಶಯ ಬೇಡಾ. ನಾವು ತುಂಬಾ ಬಡವರು. ನಿಜವಾಗ್ಲೂ. ಏನೂ ಹಣ ಇಲ್ಲ. ಇವರು ಬೇರೆ vrs.. ಅಲ್ಲಾ ಆಫೀಸಿನವರೇ ಕೆಲಸದಿಂದ ಕಿತ್ತು ಹಾಕಿದ್ದಾರೆ. ಬೇರೆ ಕೆಲ್ಸ ಕೂಡ ಮಾಡ್ತಾ ಇಲ್ಲಾ. ಖಾಯಿಲೆಯಿಂದ ಬೇರೆ ನರಳುತ್ತಾ ಇದ್ದಾರೆ.
ಅಪರಿಚಿತೆ: ಮತ್ತೇ.. ನಿಮ್ಮ ಮಗ ನೋಡುಕೊಳ್ಳೋದಿಲ್ವಾ ?
ಹೆಂಡತಿ: ಅಯ್ಯೋ ಅವನೂ ಕೂಡ ಈಗ ಹುಚ್ಚು ಹುಚ್ಚಾಗಿ ಆಡ್ತಾನೆ.
ಅಪರಿಚಿತೆ: ಏನೂ ಹುಚ್ಚಾ ?
ಹೆಂಡತಿ: ಇವರ ಕೆಲ್ಸ ಹೋದ ಮೇಲೆ ಅವನೂ ಹುಚ್ಚಾಗಿಬಿಟ್ಟಿದ್ದಾನೆ.
ಅಪರಿಚಿತೆ: (ಆಗಂತುಕನ ಕಡೆ ನೋಡಿ) ರೀ ಬನ್ರೀ ವಾಪಸ್ಸು ಹೋಗೋಣ. ನಿಮ್ಮ ಮಾತು ಕೇಳಿ ಬಂದಿದ್ದಾಯ್ತು. ಈಗ ಗೊತ್ತಾಯ್ತಲ್ಲ. ಅವರಿಗೆ ಖಾಯಿಲೆ, ಮಗನಿಗೆ ಹುಚ್ಚು. ಇಂತಹ ಮನೆಗೆ ನಮ್ಮ ಒಬ್ಬಳೇ ಮಗಳನ್ನು ಕೊಟ್ಟರೇ.... ರಾಮ ರಾಮ...
ಆಗಂತುಕ: ಆಯ್ತು ನಡೆ.
ಹೆಂಡತಿ: ಏನೂ ನೀವು ಮೂರ್ತಿಯವರಾ ? ಮತ್ತೇ ನಾಳೆ ಬರ್ತ್ತೀರಾಂತ ಇವರು ಹೇಳ್ತಾ ಇದ್ರಲ್ಲ.
ಆಗಂತುಕ: ನಾಳೆ ಅರ್ಜೆಂಟ್ ಆಗಿ ಡೈರೆಕ್ಟರ್ಸ್ ಮೀಟಿಂಗ್ ಇದೆ. ಹೋಗಲೇ ಬೇಕು. ಅದಕ್ಕೇ ಇಂದು ಬೆಳಿಗ್ಗೆ flightನಲ್ಲೇ ಹೋಗಿ ಬರೋಣಾಂತ ನಿರ್ಧಾರ ಮಾಡಿದ್ವಿ. ಫೋನ್ ಲೈನ್ ತುಂಬಾ busy ಆಗಿತ್ತು. ಖುದ್ದಾಗಿ surprise ಕೊಡೋಣಾಂತ ಹಾಗೇ ಬಂದ್ವಿ. ಇಲ್ ನೋಡಿದ್ರೇ .... ಆಯ್ತು ನಾವು ಬರ್ತೀವಿ, ಜೋಶಿಯವರಿಗೆ ಆರೋಗ್ಯ ನೋಡಿಕೊಳ್ಳಲು ಹೇಳಿಬಿಡಿ. ನಮಸ್ಕಾರ.
ಅಪರಿಚಿತೆ: ನಡೀರೀ.. ಹೋಗೋಣ
(ಹೋಗುವರು)
ಹೆಂಡತಿ: ಅಯ್ಯೋ ಹೊರಟೇ ಹೋದ್ರಲ್ಲ ! ರೀ .. ಕನ್ನಡಕ.. ಬನ್ರೀ ಹೊರಗೆ.
ಗಂಡ: ಏನೇ.. ಎಲ್ಲಾ ಹೋದ್ರಾ. ಸಧ್ಯ. ಏನೇನು ವಿಚಾರಿಸಿದ್ರು ? ನೀನು ಸರಿಯಾಗಿ ಹೇಳಿದೆ ತಾನೇ - ನಾವು ಬಡವರು, ನಂಗೆ ಖಾಯಿಲೆ...
ಹೆಂಡತಿ: ಅಯ್ಯೋ... ಎಲ್ಲಾ ಹೇಳಿ, ಮಗನಿಗೆ ಹುಚ್ಚು ಅಂತಾನೂ ಕೂಡ ಹೇಳ್ದೆ. ಹೊರಟೋದ್ರು.
ಗಂಡ: ವೆರಿ ಗುಡ್. ಇದು ನೋಡು ಹೆಂಡತಿ ಅಂದ್ರೆ ಹೀಗಿರಬೇಕು. ಏನ್ ಬುದ್ಧೀನೆ ನಿಂದು. ಇಲ್ದೆ ಹೋಗಿದ್ರೆ... ಏನ್ ಆಗ್ತಿತ್ತೋ !
ಹೆಂಡತಿ: ಅಯ್ಯೋ ಸುಮ್ ನಿರ್ರೀ ಸಾಕು. ಬಂದವರು ಮೂರ್ತಿ ಮತ್ತು ಅವರ ಪತ್ನೀ ರೀ....
ಗಂಡ: ಹಾಂ.. (ಕುಸಿದು ಬೀಳುವನು)
***
end- ನಡೆದದ್ದು ಅಲ್ಲ imagination written someಟೈಮ್ in 2002
No comments:
Post a Comment