Monday, 30 December 2002

GELLUVA MUHURTHA ಗೆಲ್ಲುವ ಮುಹೂರ್ತ 🤔😀

 


30 Dec 2002 - ನೆನಪು recollections
  
ನನ್ನ ಕೆಲಸದ ನಿಮಿತ್ತ ನಾನು ವಾಸವಾಗಿದ್ದ ಮೊದಲ ಊರು ಈ ರಾಣೆಬೆನ್ನೂರು. ನನ್ನ ಸ್ನೇಹಿತ ಶ್ರೀ ವೆಂಕಟೇಶ ಐರಣಿಯವರು ಸೇನೆಯಿಂದ ಸ್ವಯಂ ನಿವೃತ್ತಿ ಪಡೆದು, ತಮ್ಮ ಹುಟ್ಟೂರಾದ ರಾಣೆಬೆನ್ನೂರಿನ ಟೆಲಿಫೋನ್ ಕಚೇರಿಯಲ್ಲಿ ಕೆಲಸಕ್ಕೆ ಆಗತಾನೆ ಸೇರಿಕೊಂಡಿದ್ದರು. ವೆಂಕಟೇಶ ಐರಣಿಯವರು ನನಗೆ ಪರಿಚಯವಾದಾಗಿನಿಂದ ಆತ್ಮೀಯರೂ ಮತ್ತು ಹಿತೈಷಿಗಳೂ ಆಗಿದ್ದರು. ನಮ್ಮಿಬ್ಬರ ವಯಸ್ಸಿನಲ್ಲಿ ಬಹಳ ಅಂತರವಿದ್ದರೂ, ಸ್ನೇಹದ ಬಾಂಧವ್ಯ ಗಾಢವಾಗಿಯೇ ಇತ್ತು. ೧೯೮೦ರಲ್ಲಿ ಅವರ ಮದುವೆಯ ದಿನ ನಡೆದ ಈ ಪ್ರಸಂಗ ನನಗೆ ಇಂದಿಗೂ ನೆನಪಿನಲ್ಲಿದೆ.

ಹುಡುಗಿಯ ತಂದೆಯವರು ಹಾನಗಲ್ ಊರಿನವರಾಗಿದ್ದು, ಮದುವೆಯನ್ನು ತಮ್ಮ ಸ್ವಂತ ಊರಿನಲ್ಲಿಯೇ ಏರ್ಪಡಿಸಿದ್ದರು. ಹುಡುಗನ ಕಡೆಯವರನ್ನು ಕರೆದುಕೊಂಡು ಹೋಗಲು ಒಂದು ಖಾಸಗಿ ಬಸ್ಸಿನ ವ್ಯವಸ್ಥೆ ಮಾಡಿದ್ದರು. ಮದುವೆಯ ಹಿಂದಿನ ದಿನ ಮಧ್ಯಾಹ್ನ ಊಟ ಮುಗಿಸಿ, ನಾವೆಲ್ಲ ಆ ಬಸ್ಸಿನಲ್ಲಿ ರಾಣೆಬೆನ್ನೂರಿನಿಂದ ಪ್ರಯಾಣ ಬೆಳಸಿ ಸಂಜೆ ಹಾನಗಲ್ ತಲುಪಿದಾಗ, ಹೆಣ್ಣಿನ ಕಡೆಯಿಂದ ಆದರದ ಸ್ವಾಗತ ಕಾದಿತ್ತು. ಹಾನಗಲ್ ಸಣ್ಣ ಊರಾಗಿದ್ದರಿಂದ, ಬಹಳಷ್ಟು ಮನೆಯವರು ಮನೆಯಲ್ಲಿಯೇ ಮದುವೆಯ ಕಾರ್ಯಕ್ರಮ ನೆರವೇರಿಸುತ್ತಿದ್ದರು; ಕೆಲವರು ಸಿನಿಮಾ ಟಾಕೀಸ್‌ನಲ್ಲಿ ನಿಯೋಜಿಸುತ್ತಿದ್ದರು. ಛತ್ರಗಳೂ ಚಿಕ್ಕದಾಗಿದ್ದು, ಒಂದೋ ಎರಡೋ ಇದ್ದವು. ಸ್ನೇಹಿತ ವೆಂಕಟೇಶ್‌ರವರ ಮದುವೆಯನ್ನು ಹಾನಗಲ್‌ನ ಒಂದು ಛತ್ರದಲ್ಲಿ ನಿಯೋಜಿಸಲಾಗಿತ್ತು. ಛತ್ರದಲ್ಲಿ ಕೋಣೆಗಳು ಕಡಿಮೆ ಇದ್ದಿದ್ದರಿಂದ, ಅಲ್ಲೇ ಅಕ್ಕಪಕ್ಕದವರ ಮನೆಗಳಲ್ಲಿ ನಮಗೆ ತಂಗುವ ವ್ಯವಸ್ಥೆಯನ್ನೂ ಸಹ ಮಾಡಿದ್ದರು.

ಸ್ನೇಹಿತ ವೆಂಕಟೇಶ್‌ರವರ ತಂದೆ ಇರದ ಕಾರಣ, ಅವರ ಅಣ್ಣ ಮತ್ತು ಅತ್ತಿಗೆಯವರೇ ಧಾರೆ ಎರೆದು ಕೊಡಬೇಕಿತ್ತು. ವೆಂಕಟೇಶ್‌ರವರ ಅಣ್ಣ ತುಂಬಾ ಬಹಳ ಬೆರೆಯುವ ಸ್ವಭಾವದವರಾಗಿದ್ದು (social), ಹಾಸ್ಯ ಮಾಡುತ್ತಾ ಎಲ್ಲರನ್ನು ರೇಗಿಸುತ್ತಿದ್ದರು. ಅವರ ಹಾಸ್ಯದಿಂದಲೇ ನಮ್ಮ ಬಸ್ ಪ್ರಯಾಣದ ದಾರಿ ಸಾಗಿದ್ದು ಗೊತ್ತಾಗದೇ, ಬಹಳ ಖುಷಿ ತಂದಿತ್ತು. ಹಾಗೆಯೇ ಅವರಿಗೆ ರಮ್ಮಿ ಇಸ್ಪೀಟ್ ಆಟವೆಂದರೆ ಪಂಚಪ್ರಾಣ.

ಸಂಜೆಯ ಶಾಸ್ತ್ರ ಮುಗಿಸಿ ಊಟ ಮಾಡಿದ ಮೇಲೆ, ಕೆಲವು ಸ್ನೇಹಿತರು ನಮ್ಮ ಕೋಣೆಯಲ್ಲಿ ರಮ್ಮಿ ಆಟ ಪ್ರಾರಂಭಿಸಿದರು. ಸ್ವಲ್ಪ ಸಮಯದಲ್ಲೇ ವೆಂಕಟೇಶ್‌ರವರ ಅಣ್ಣ ಕೂಡ ಬಂದು ಸೇರಿಕೊಂಡರು. ನನಗೆ ಅಷ್ಟಾಗಿ ಆಟ ಗೊತ್ತಿರಲಿಲ್ಲ, ಆದ್ದರಿಂದ ಸುಮ್ಮನೆ ಆಟವನ್ನು ಗಮನಿಸುತ್ತಿದ್ದೆ. ನಂತರ, ಆಟ ಬಾರದವರ ಜೊತೆಗೆ ಹೊರಗೆ ಸುತ್ತಾಡಿಕೊಂಡು ಬಂದು ನಿದ್ರೆ ಮಾಡೋಣ ಎಂದು ಯೋಚಿಸಿ ನಮ್ಮ ಕೋಣೆಗೆ ಬಂದಾಗ ರಮ್ಮೀ ಆಟ ಭರದಿಂದ ಸಾಗಿತ್ತು. ಆಗಲೇ ಸಮಯ ಸುಮಾರು ೧೧ ಗಂಟೆ. ಆಗ ವೆಂಕಟೇಶ್‌ರವರ ತಾಯಿಯವರು ಬಂದು ಎಲ್ಲರನ್ನು ಬೈದು ಆಟವನ್ನು ನಿಲ್ಲಿಸಿದರು. ದೊಡ್ಡವರ ಮಾತು ಕೇಳಲೇ ಬೇಕಾಗಿದ್ದರಿಂದ, ಆಟವನ್ನು ಅಲ್ಲಿಗೇ ನಿಲ್ಲಿಸಿ, ಬೆಳಿಗ್ಗೆ ಎಂಟು ಗಂಟೆಗೆ ಛತ್ರದಲ್ಲಿರುವ ಒಂದು ನಿಗದಿತ ಕೋಣೆಯಲ್ಲಿ ಆಟವನ್ನು ಮುಂದುವರೆಸಲು ನಿರ್ಧರಿಸಿದರು.

ಆಟದ ಹುಚ್ಚು ಕಡಿಮೆಯಾಗದಿದ್ದರಿಂದ, ಎಲ್ಲಾ ಆಟಗಾರರು ಬೆಳಿಗ್ಗೆ ಸುಮಾರು ೮ ಗಂಟೆಗೆ ಛತ್ರಕ್ಕೆ ಬಂದು, ಅಲ್ಲಿಯೇ ಒಂದು ಕೋಣೆಯಲ್ಲಿ ಮತ್ತೆ ಆಟ ಪ್ರಾರಂಭಿಸಿದರು. ಮುಹೂರ್ತ ಸುಮಾರು ೧೦ ಗಂಟೆಗೆ ಇತ್ತು. ನಾನು ಮತ್ತು ನನ್ನ ಸ್ನೇಹಿತರು ಬೆಳಿಗ್ಗೆ ಸರಿಯಾಗಿ ೯:೩೦ಕ್ಕೆ ಮದುವೆಯ ಮಂಟಪಕ್ಕೆ ಬಂದು ಮುಹೂರ್ತದ ಸಮಯಕ್ಕೆ ಕಾಯುತ್ತಿದ್ದೆವು.

ಧಾರೆಯ ಮುಹೂರ್ತ ಹತ್ತಿರವಾಗುತ್ತಿದ್ದಂತೆ, ಪುರೋಹಿತರು 'ಸುಮುಹೂರ್ತೆ ಸಾವಧಾನ' ಎಂದು ಹೇಳುತ್ತಿದ್ದಾಗ, ವೆಂಕಟೇಶ್‌ರವರ ಅತ್ತಿಗೆಗೆ ತಮ್ಮ ಪತಿ ಅಲ್ಲಿಲ್ಲ ಎಂಬುದು ಮನವರಿಕೆಯಾಯಿತು. ಕೂಡಲೇ ಅವರಿಗಾಗಿ ಹುಡುಕಲು ಪ್ರಾರಂಭಿಸಿದರು. ಕೆಲ ಸಮಯದ ನಂತರ ಅವರನ್ನು ಛತ್ರದಲ್ಲಿದ್ದ ಸ್ನೇಹಿತರ ಆಟದ ಕೋಣೆಗೆ ಕರೆದೊಯ್ದರು. ನಾನೂ ಕೂಡ ಅವರ ಜೊತೆಯಲ್ಲೇ ಆಟದ ಕೋಣೆಗೆ ಬಂದಾಗ ಕಂಡ ದೃಶ್ಯವೇನೆಂದರೆ, ವೆಂಕಟೇಶ್‌ರವರ ಅಣ್ಣ ಆರಾಮವಾಗಿ ಆಟ ಆಡುತ್ತಿದ್ದರು. ಬಹುಶಃ ಬೆಳಿಗ್ಗೆ ಬೇಗ ಸಿದ್ಧರಾಗಿ ಕೆಲವು ಶಾಸ್ತ್ರಗಳಲ್ಲಿ ಭಾಗವಹಿಸಿ ಮತ್ತೆ ರಮ್ಮಿ ಆಡಲು ಓಡಿ ಬಂದಿದ್ದರು.

ವೆಂಕಟೇಶ್‌ರವರ ಅತ್ತಿಗೆ "ಏನ್ರೀ! ಅಕ್ಕಿಕಾಳು ಸಮಯ (ಧಾರೆಯ ಸಮಯ) ಹತ್ತಿರವಾಗುತ್ತಿದೆ, ನೀವು ಇನ್ನೂ ಇಲ್ಲೇ ಇದ್ದೀರಾ! ಪುರೋಹಿತರು 'ಸುಮುಹೂರ್ತೆ ಸಾವಧಾನ' ಎಂದು ಹೇಳುತ್ತಲೇ ಇದ್ದಾರೆ. ನಿಮಗೆ ಸ್ವಲ್ಪವಾದರೂ ಬುದ್ಧಿ ಇರಬೇಡವೇ?" ಎಂದು ಕೋಪದ ನುಡಿಗಳನ್ನು ಆಡುತ್ತಿದ್ದಾಗ, ಅವರ ಯಜಮಾನರು ಸ್ವಲ್ಪವೂ ವಿಚಲಿತರಾಗದೆ ಮತ್ತು ತಲೆ ಕೆಡಿಸಿಕೊಳ್ಳದೆ, "ಪುರೋಹಿತರಿಗೆ 'ಸುಮುಹೂರ್ತೆ ಸಾವಧಾನ' ಮಂತ್ರವನ್ನು ಇನ್ನೂ ಸ್ವಲ್ಪ ಹೊತ್ತು ಸಾವಧಾನದಿಂದ (ತಾಳ್ಮೆಯಿಂದ) ಹೇಳಲು ಹೇಳು. ಈಗ ನಾನು ಇಲ್ಲಿ 'ಗೆಲ್ಲುವ ಮುಹೂರ್ತ'ದಲ್ಲಿ ಇದ್ದೇನೆ. ಒಂದೆರಡು ನಿಮಿಷದಲ್ಲಿ 'ಶೋ' (ಆಟ) ಮುಗಿಸಿ ಬಂದುಬಿಡುತ್ತೇನೆ," ಎಂದು ಹೇಳಿ ಎಲ್ಲರನ್ನೂ ನಗುವೆಡೆಗೆ ಕೊಂಡೊಯ್ದದ್ದು ನನಗೆ ಇಂದಿಗೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.
***

the Winning Muhurta

The year was 1980, and Ranebennur was the first town my job took me to. There, I befriended Shri Venkatesh Airani, a well-wisher and close friend who had just retired from the army and joined the local Telephone Office. Despite a significant age difference, our friendship was deep. I vividly recall the following incident, which happened on his wedding day.

The bride's father, a native of Hangal, hosted the wedding there. A private bus was arranged to transport the groom's party from Ranebennur. We boarded it after lunch the day before the wedding and received a warm welcome in Hangal that evening. As Hangal was small, wedding halls (choultries) were scarce. Venkatesh's wedding was held in one such choultry. Since rooms were limited, we were lodged in the homes of nearby neighbors.

Since Venkatesh's father had passed away, his elder brother and sister-in-law were designated to perform the Dhare ceremony (giving away the bride). The brother was extremely social and kept everyone entertained with jokes throughout the bus journey. He was also an avid enthusiast of the card game, Rummy.

After the evening rituals and dinner, a group of friends started playing Rummy in our temporary room, and Venkatesh’s brother soon joined. I, unfamiliar with the game, merely watched. By about 11 PM, the game was in full swing. Venkatesh’s mother finally arrived, put a stop to the game with a scolding, and the players agreed to obey the elder's word. They decided to resume the game at 8 AM the next morning in a specific room at the choultry.

True to their dedication, the players gathered again at the choultry around 8 AM. The official wedding muhurta (auspicious time) was set for around 10 AM. My other friends and I arrived at the hall by 9:30 AM and waited patiently.

As the Dhare ceremony neared, the priests began the chant, "Sumuhurte Savadhana" (Be aware of the auspicious moment). It was then that Venkatesh's sister-in-law realized her husband was missing. A quick search led her to the game room. I followed her inside, where Venkatesh’s brother was calmly playing Rummy. He must have quickly performed his early rituals before rushing back to the cards.

The sister-in-law was furious: "What are you doing here? The rice-grain ceremony (ಅಕ್ಕಿಕಾಳು ಸಮಯ-ಧಾರೆ)  is about to begin! The priest is chanting 'Sumuhurte Savadhana'—do you have no sense at all?" Unfazed and completely unbothered, her husband replied, "Tell the priest to chant the 'Sumuhurte Savadhana' mantra with patience for a little longer. I am currently at the 'Winning Muhurta' here. I will finish this 'show' in a minute or two and come." His witty reply instantly broke the tension, dissolving the room into laughter—a memory that remains vividly etched in my mind today. 
***



end- ನಡೆದದ್ದು thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...

No comments:

Post a Comment