Friday, 30 March 2018

KUMBHAKARNANA KANASU ಕುಂಭಕರ್ಣನ ಕನಸು 🤔😀

 



ನೆನಪು
ಈ ಪ್ರಸಂಗ ೧೯೭೬ನೆಯ ವರುಷದಲ್ಲಿ ನಡೆದಿರುವಂಥದ್ದು.  ಅಂದು ಶನಿವಾರ.  ನಾನು ಕಾಲೇಜಿನಿಂದ ಮಧ್ಯಾನ್ಹ ೨ ಗಂಟೆಗೆ ಬಂದಿದ್ದೆ.  ಹಾಗೆಯೇ ಅಣ್ಣ ಗೋಪಿ ಕೂಡ ಆಫೀಸಿನಿಂದ ಬೇಗನೇ ಬಂದಿದ್ದನು.  ನಾವಿಬ್ಬರೂ ಊಟಮಾಡಿ ಮಲಗಿದೆವು.  ಬೇರೆ ಏನೂ ಕೆಲಸವಿಲ್ಲದ್ದರಿಂದ ಈ ನಿದ್ರೆ. ನಾನೋ ಹಾಸಿಗೆ ಕೂಡ ಹಾಸಿ ಅದರ ಮೇಲೆ ಮಲಗಿದ್ದೆ.  ಮಂಚದ ಮೇಲೆ ಮಲಗುವ ಪ್ರಶ್ನೆ ಇರಲಿಲ್ಲ, ಏಕೆಂದರೆ ಮಂಚ ಇರಲಿಲ್ಲ, ರೂಮು ಕೂಡ ಚಿಕ್ಕದಿತ್ತು. 

ನಮ್ಮ ಮನೆ ಚಿಕ್ಕದಾಗಿ ಇತ್ತು. ಒಂದು ದೊಡ್ಡ ಮನೆಯನ್ನು ಅರ್ಧ ಮಾಡಿ ನಮಗೆ ಒಂದು portion ಬಾಡಿಗೆಗೆ ಕೊಟ್ಟಿದ್ದರು.  ಹೊರಗಿನಿಂದ ಬಾಗಿಲು ತೆಗೆದ ತಕ್ಷಣ ಇರುವುದು ಹಾಲು (living room), ಅದು ಚಿಕ್ಕದು.  ಅದರ ಬಲಗಡೆ ಒಂದು ರೂಮು, ಅದೂ ಕೂಡ ಚಿಕ್ಕದೇ. ಹಾಲಿನ ಎಡಗಡೆ ಒಂದು ಸಣ್ಣ ಬಚ್ಚಲು ಮನೆ ಅಡುಗೆ ಮನೆ ಸಹಿತ ಇತ್ತು. 

ನಾನು ಮತ್ತು ನನ್ನ ಅಣ್ಣ ಇಬ್ಬರು ನಿದ್ರೆ ಮಾಡುವುದರಲ್ಲಿ expert. ಹಾಗಾಗಿ ಚಿಕ್ಕ ಪುಟ್ಟ ಶಬ್ಧಗಳಾವುವು ನಮ್ಮ ನಿದ್ರೆಯನ್ನು ಕೆಡಿಸುತ್ತಿರಲಿಲ್ಲ. ಇಬ್ಬರಿಗೂ ನಿದ್ರೆ ಹತ್ತಿದೆ. ಹೊರಗೆ ಏನಾಗುತ್ತಿದೆ ಎಂಬ ಅರಿವು ಕೂಡ ಇಲ್ಲದೆ ಆರಾಮವಾಗಿ ನಿದ್ರೆ ಮಾಡುತ್ತಿದ್ದೆವು.

ನನಗೆ ಕನಸು ಬೀಳುವುದು ಸಾಮಾನ್ಯ ಮತ್ತು ಮಧ್ಯಾನ್ಹ ಕೂಡ ಕನಸು ಬೀಳುತ್ತಿತ್ತು.  ಅಂದು ಕೂಡ ನನಗೆ ಕನಸು ಬಿದ್ದಿತ್ತು.  ಏನೆಂದರೆ, ಕನಸಿನಲ್ಲಿ ನಾನು ತೆಪ್ಪದ (raft) ಮೇಲೆ ನಾನು ನದಿಯ ನೀರಿನಲ್ಲಿ ವಿಹಾರ ಮಾಡುತ್ತಿದ್ದೆ. ಕೈಯಿಂದ ನೀರನ್ನೂ ಮುಟ್ಟಿದ್ದೆ.  ಅದಕ್ಕೆ ಕೈಯೆಲ್ಲ ತಣ್ಣಗಾದ ಅನುಭವ. ಇಷ್ಟು ಮಾತ್ರ ನನಗೆ ಈಗಿರುವ ಆಗಿನ ಕನಸಿನ ನೆನಪು.

ಆಗಲೇ ಹೇಳಿದಂತೆ ಮನೆಯ ಹಾಲಿನ ಬಲಭಾಗದಲ್ಲಿ ರೂಮು.  ಅಲ್ಲಿ ಮೊದಲು ನಾನು ಹಾಸಿದ ಹಾಸಿಗೆ ಮೇಲೆ ಮಲಗಿದ್ದೆ.  ನನ್ನ ಪಕ್ಕದಲ್ಲಿ ಚಾಪೆಯನ್ನು ಹಾಸಿ ಅದರ ಮೇಲೆ ನನ್ನ ಅಣ್ಣ ಮಲಗಿದ್ದ.  ಅವನ ನಿದ್ರೆಯೂ ಜೋರಾಗಿತ್ತು.

ನನ್ನ ಅಕ್ಕ ಸಂಜೆ ೬ ಗಂಟೆಗೆ ಮನೆಗೆ ಬಂದು ಬಾಗಿಲು ಬಡಿಯುತ್ತಿದ್ದಾಳೆ.  ನನಗೋ ಬಹಳ ನಿದ್ರೆ, ಸ್ವಲ್ಪವೂ ಗೊತ್ತಾಗಲೇ ಇಲ್ಲ.  ಕೆಲ ಸಮಯದ ನಂತರ ಅಣ್ಣ ಬಾಗಿಲಿನ ಶಬ್ದಕ್ಕೆ ಸ್ಪಂದಿಸಿ ಎದ್ದು ಬಾಗಿಲು ತೆಗೆಯಲು ಹೋದಾಗ ನೆಲದ ಮೇಲೆಲ್ಲ ನೀರು ತುಂಬಿತ್ತು.  ಅವನ ಚಾಪೆಯ ಹತ್ತಿರ ನೀರು ಇನ್ನು ಬಂದಿರಲಿಲ್ಲ, ಹಾಗಾಗಿ ಅವನಿಗೆ ಗೊತ್ತಾಗಿರಲಿಕ್ಕಿಲ್ಲ. 

ಅಕ್ಕ ಒಳಗೆ ಬಂದು ನೋಡುತ್ತಾಳೆ, ಇಡೀ ಮನೆಯಲ್ಲಾ ನೀರು. ಕಾರಣ ಬಚ್ಚಲು ಮನೆಯ ನಲ್ಲಿ ನಿಲ್ಲಿಸಿರಲಿಲ್ಲ.  ಆ ದಿನಗಳಲ್ಲಿ ನಲ್ಲಿಯಲ್ಲಿ ನೀರು ಬೆಳಿಗ್ಗೆ ಹಾಗೂ ಸಂಜೆಯ ವೇಳೆ  ದಿನಕ್ಕೆ ಎರಡು ಬಾರಿ ಎರಡೆರಡು ಗಂಟೆಯ ತನಕ ಬರುತ್ತಿತ್ತು.  ಆ ದಿನ ಬೆಳಿಗ್ಗೆ ನಾನೋ ಅಥವಾ ನನ್ನ ಅಣ್ಣನೋ ನಲ್ಲಿಯನ್ನು ನಿಲ್ಲಿಸಲು ಮರೆತಿದ್ದೆವು.  

ನೀರಿನ force ಜಾಸ್ತಿ ಇದ್ದಿದ್ದರಿಂದ  ಮೊದಲು ಬಚ್ಚಲು ತುಂಬಿ ನಂತರ ಬಚ್ಚಲು ಮನೆ, ಹಾಲು ಹಾಗೂ ರೂಮು ಈ ಎಲ್ಲಾ ಜಾಗಗಳಲ್ಲಿ ಹರಿದು ಬಂದಿತ್ತು.  ನನ್ನ ಹಾಸಿಗೆಯೂ ಕೂಡ ಬಹಳ ಒದ್ದೆಯಾಗಿ ನನ್ನ ಒಂದು ಕೈ ಕೂಡ ತಣ್ಣಗಾಗಿತ್ತು.  ಹಾಗಾಗಿಯೇ ಕನಸಿನಲ್ಲಿ ನದಿ ನೀರು ಎಲ್ಲಾ ಕಾಣಿಸಿತ್ತು. ಮನೆಯಲ್ಲಿ ನಲ್ಲಿಯ ನೀರು ಜೋರಾಗಿ ಬರುತ್ತಿದ್ದದ್ದು ನನಗೇನೂ ಗೊತ್ತಾಗಲೇ ಇಲ್ಲ.

ಅಕ್ಕ ಬಯ್ಯುತ್ತಿದ್ದಾಗ ಎಚ್ಚರವಾಯ್ತು.  ಏನೂ ಮಾಡಲು ತೋಚದೆ ಅಣ್ಣ, ಅಕ್ಕ ಇಬ್ಬರ ಜೊತೆಗೂಡಿ ಎಲ್ಲಾ ನೀರನ್ನು ಬಟ್ಟೆಯಿಂದ ಒರೆಸಿ ಬಕೆಟ್ಟಿನಲ್ಲಿ ಹಿಂಡಿ ಬಚ್ಚಲ ಕಸ ತೆಗದು ಸರಿ ಮಾಡಲು ಸುಮಾರು ಒಂದು ಗಂಟೆಯ ವೇಳೆ ಬೇಕಾಯಿತು.   ನೆಲವೆಲ್ಲ ತೇವದಿಂದ ಇದ್ದಿದ್ದರಿಂದ ಎಲ್ಲರೂ ಹತ್ತಿರದಲ್ಲೇ ಇದ್ದ ದೊಡ್ಡ ಅಕ್ಕ ಸುಧಾಳ ಮನೆಗೆ ಹೋಗಿ ರಾತ್ರಿಯ ಊಟಕೂಡ ಅಲ್ಲೇ ಮಾಡಬೇಕಾದ ಪರಿಸ್ಥಿತಿ ಬಂದೊದಗಿತ್ತು. 

ಆದರೆ ಹಾಸಿಗೆ ಮಾತ್ರ ತುಂಬಾ ಒದ್ದೆಯಾಗಿದ್ದರಿಂದ ಅದನ್ನು ಹಾಗೆ ಮಡಿಚಿ ಮಾರನೆಯ ಭಾನುವಾರದ  ದಿನ ಪೂರ್ತಿ ಬಿಸಿಲಿನಲ್ಲಿ ಒಣಗಿಸಿದರೂ ಒಣಗಲಿಲ್ಲ, ಮತ್ತೆ ಅಕ್ಕನಿಂದ ಬೈಗುಳ ಕೇಳಬೇಕಾಯಿತು.  ಈ ಸನ್ನಿವೇಶ ಸಾಮಾನ್ಯವಾಗಿ ನಂಬಲು ಅಸಾಧ್ಯ ಆದರೆ ಮಾತ್ರ ಸತ್ಯ.

ನನ್ನ ಕನಸುಗಳು ಯಾವಾಗಲೂ ವಾಸ್ತವಕ್ಕೆ ಹೊಂದಿಕೊಂಡು ನಿದ್ರೆಯಿಂದ ಎಚ್ಚರ ಮಾಡದೆ ಹಾಗೆ ಪರಿವರ್ತನೆಗೊಳ್ಳುತ್ತಿರುತ್ತವೆ.  ಉದಾಹರಣೆಗೆ ನಾನು ನಿದ್ರೆಯಲ್ಲಿದ್ದಾಗ ಹೊರಗಡೆ ಧ್ವನಿವರ್ಧಕದಲ್ಲಿ ಏನಾದರೂ ಪ್ರಸಾರ, ಪ್ರಚಾರ ಅಥವಾ ಘೋಷಣೆ ಕೂಗುತ್ತಿದ್ದರೆ... ನನಗೆ ತಕ್ಷಣ ಕನಸಿನಲ್ಲಿ ಯಾವುದೋ ಭವನ ಅಥವಾ ಸಭಾಂಗಣದಲ್ಲಿ ನಾನು ಕುಳಿತ ಹಾಗೆ ಮತ್ತು ಈ ಪ್ರಸಾರ, ಪ್ರಚಾರ, ಘೋಷಣೆ ಕೇಳುತ್ತಿರುವ ಹಾಗೆ ಕಾಣಿಸುತ್ತಿರುತ್ತದೆ.  ಇನ್ನೊಂದು ಉದಾಹರಣೆ.. ನಾನು ಮಲಗಿದ್ದಾಗ TVಯಲ್ಲಿ ಏನಾದರೂ ಹಾಡು ಹಾಕಿದ್ದರೆ ನನಗೆ ಹಾಡಿನ ಚಿತ್ರ ಗೊತ್ತಿದ್ದರೆ, ಸಿನೆಮಾ ಟಾಕೀಸ್ ನಲ್ಲಿ ಆ ಚಿತ್ರ ನೋಡುತ್ತಾ ಇರುವ ಹಾಗೆ ಕನಸಿನಲ್ಲಿ ಅನ್ನಿಸುತ್ತಿರುತ್ತದೆ.   ಎಚ್ಚರ ಆದಾಗ ತಕ್ಷಣ ಕನಸು ಮರೆತುಹೋಗುತ್ತದೆ, ಎಷ್ಟು ಯೋಚಿಸಿದರೂ ನೆನಪಾಗುವುದಿಲ್ಲ.

ಹಾಗಾಗಿ ಪ್ರತಿಸಲ ಮಲಗುವಾಗ ಏನೇ ಕನಸು ಬಿದ್ದರೂ ಅದನ್ನು ನೆನಪಿಟ್ಟುಕೊಳ್ಳಬೇಕೆಂದು ಮನಸ್ಸಿನಲ್ಲಿ ನೆನಪಿಸುತ್ತಾ ಮಲಗುತ್ತೇನೆ. ಆದರೂ ನೆನಪಿರುವ ಕನಸುಗಳು ಬಹಳ ವಿರಳ.  ಅಂದಿನ ಕನಸು ಕೈ ಒದ್ದೆಯಾಗಿದ್ದರಿಂದ ತಕ್ಷಣ flashback ನೆನಪಾಗಿರಬೇಕು.  ಇಂದಿಗೂ ನೆನಪಿದೆ, ಮರ್ಯಾದೆ ಪ್ರಶ್ನೆ, ಯಾರ ಹತ್ತಿರ ಹೇಳಿಕೊಂಡಿಲ್ಲ ಅಷ್ಟೇ. 
***
end- ನಡೆದದ್ದು thoughts documented ಸಂಟೈಂ ಇನ್ 2002 by ಸುರೇಶ್ ಹುಲಿಕುಂಟಿ

.


go back to... 
    click--> LINKS TO ARTICLES 

...

No comments:

Post a Comment