Sunday, 30 August 2020

APPANA TOPI ಅಪ್ಪನ ಟೋಪಿ

 


ನೆನಪು - ಅಪ್ಪನ ಟೋಪಿ  father's cap
ಈ ಪ್ರಕರಣ ನಡೆದು 42 ವರುಷಗಳ ಮೇಲೆ ಆಗಿದೆ. ಆಗ ನಾನಿನ್ನೂ ತುಂಬಾ ಚಿಕ್ಕವನಿದ್ದೆ. ಆದರೂ ಕೆಲವು ಸನ್ನಿವೇಶಗಳು ನಮ್ಮ  ಮನಸ್ಸಿನಲ್ಲಿ ಬೇರೂರಲ್ಪಡುತ್ತವೆ.  ಈ ಪ್ರಸಂಗವೂ ಹಾಗೆಯೇ.

ನಮ್ಮ ತಂದೆಯವರು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಕೆಲಸದಿಂದ VRS ಪಡೆದು ಮೈಸೂರಿನಲ್ಲಿ ನಮ್ಮ ಜೊತೆಯಲ್ಲೇ ಇದ್ದರು. ನನ್ನ ಅಕ್ಕ ಸುಧಾಳ  ಮದುವೆ ಅವಳ ಹತ್ತೊಂಬತ್ತನೆಯ ವಯಸ್ಸಿನಲ್ಲಿ ನಿಶ್ಚಯವಾಗಿ 1969 ರಲ್ಲಿ ಮೈಸೂರಿನಲ್ಲಿ ಅಗ್ರಹಾರದಲ್ಲಿರುವ 'ಕಲ್ಯಾಣ ಭವನ' ಛತ್ರದಲ್ಲಿ ನೆರವೇರಿಸಿದರು. ನಾವೆಲ್ಲ ಚಿಕ್ಕವರಾಗಿದ್ದರಿಂದ ಎಲ್ಲಾ ಕೆಲಸಗಳ ತಯಾರಿ ನಮ್ಮ ತಂದೆ ಒಬ್ಬರೇ ಮಾಡಿದ್ದರು. 

ಮೂರು ದಿನಗಳ ಮದುವೆ ಸಮಾರಂಭ. ದೇವರ ಸಮಾರಾಧನೆಯ ಹಿಂದಿನ ಸಂಜೆ ನಾವೆಲ್ಲ ಛತ್ರಕ್ಕೆ ಹೋಗಿದ್ದೂ ಆಯಿತು. ಮಾರನೆಯ ದಿನ ಬೆಳಿಗ್ಗೆ ದೇವರ ಸಮಾರಾಧನೆ ಕಾರ್ಯಕ್ರಮದ ನಂತರ ಮಧ್ಯಾನ್ಹದ ಊಟ ಮುಗಿದ ಮೇಲೆ ನಮ್ಮ ತಂದೆಯವರು ಛತ್ರದಿಂದ ನಾಪತ್ತೆ! ಸಂಜೆ ನಾಲ್ಕು ಗಂಟೆಯ ವೇಳೆ 'ಅಪ್ಪ ಎಲ್ಲಿ' ಎಂದು ನಾವೆಲ್ಲ ಕೇಳಿದಾಗ ಅವರ ಹುಡುಕುವ ಪ್ರಯತ್ನ ಪ್ರಾರಂಭವಾಯ್ತು. ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಮನೆಯ ಬೀಗದಕೈ ಅಮ್ಮನ ಹತ್ತಿರ ಇದ್ದಿದ್ದರಿಂದ ಅಪ್ಪ ಮನೆಯ ಕಡೆಗೆ ಹೋಗಿರಲ್ಲ ಎಂಬುದು ಖಾತ್ರಿ ಆಯ್ತು. ಈಗ ಎಲ್ಲರಿಗೂ ಭಯ ಮತ್ತೆ ಹೆಚ್ಚಾಯಿತು. ಅರ್ಧ ಗಂಟೆಯ ನಂತರ, ಅಂದರೆ ಸುಮಾರು  ನಾಲ್ಕುವರೆ ಗಂಟೆಗೆ ಅಪ್ಪ ನಡದೇ ಛತ್ರಕ್ಕೆ ವಾಪಸ್ಸು ಬಂದರು. ಅವರು ಯಾರಿಗೂ ಹೇಳದಯೇ ನಡೆದುಕೊಂಡು ಒಂದೂವರೆ ಆಣೆ ಗಲ್ಲಿಯ (market place) ಕಡೆಗೆ ಹೋಗಿದ್ದಾರೆ. ಒಂದೂವರೆ ಆಣೆ ಗಲ್ಲಿ, ಛತ್ರದಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. 

ಅಪ್ಪನನ್ನು ನೋಡಿ ಅಮ್ಮ ನಿಟ್ಟಿಸುರು ಬಿಟ್ಟರೂ ಅಮ್ಮನ ಮುಖದಲ್ಲಿ ಸಂತೋಷ  ಹಾಗೂ ಕೋಪ ಎರಡೂ ಒಟ್ಟಿಗೇ ಕಾಣಿಸಿಕೊಂಡಿತು. ಎಲ್ಲರೂ ಎಲ್ಲಿಗೆ ಹೋಗಿದ್ದೆ ಎಂದು ಅಪ್ಪನನ್ನು ಕೇಳಿದಾಗ ಮುಗ್ಧ ಅಪ್ಪ ಹೇಳಿದ್ದು ಹೀಗೆ. "ನನ್ನ ಕಪ್ಪು ಟೋಪಿ ಸ್ವಲ್ಪ ಹಳೆಯದಾಗಿದೆ, ಅದಕ್ಕೆ ಹೊಸ ಟೋಪಿ ಒಂದೂವರೆ ಆಣೆ ಗಲ್ಲಿಯಿಂದ ತರಲು ಹೋಗಿದ್ದೆ". ಎಲ್ಲರಿಗೂ ಆತಂಕವಿದ್ದಿದ್ದರಿಂದ, ಏಕೆ ನಡೆದು ಹೋಗಬೇಕಿತ್ತು, ಮತ್ತು ಟೋಪಿ ತರುವುದು ಈ ಸಮಯದಲ್ಲಿ ಮುಖ್ಯನಾ ಎಂದೆಲ್ಲ ಪ್ರಶ್ನೆಗಳ ಸುರಿಮಳೆಯಾಯ್ತು. ಅಪ್ಪ ಏನು ಉತ್ತರ ಕೊಟ್ಟರೋ ನನಗೆ ನೆನಪಿಲ್ಲ. ಸಧ್ಯ, ವರಪೂಜೆ ಸಮಯಕ್ಕೆ ಮುಂಚೆ ಇದ್ದಾರಲ್ಲ ಎಂದು ಎಲ್ಲರೂ ಸಮಾಧಾನ ಮಾಡಿಕೊಂಡರು.

ಅಂದಿನ ಆತಂಕದ ಸಮಯ ಆಗ ನನಗೆ ಏನೂ ಗೊತ್ತಾಗಲೇ ಇಲ್ಲ. ಅಂದು ನನ್ನಲ್ಲಿ ಏನೂ ಆತಂಕದ ಭಾವನೆ ಮೂಡಿಸಿರಲಿಲ್ಲವಾದರೂ,  ಈಗ ಯೋಚಿಸಿದರೆ ನನಗೆ ಅನಿಸಿದ್ದು ಹೀಗೆ.  

ತುಂಬಾ ಸರಳ ಸ್ವಭಾವದ ಅಪ್ಪ ಐದು ಕಿಲೋಮೀಟರ್ ದೂರದಲ್ಲಿದ್ದ ಮೈಸೂರು ವಿಶ್ವವಿದ್ಯಾನಿಲಯದ ಲೈಬ್ರರಿಗೆ ಹೋಗಿ ನಾಲ್ಕು ಪುಸ್ತಕಗಳನ್ನು ತಂದು ಹದಿನೈದು ದಿನಗಳಲ್ಲಿ ಓದು ಮುಗಿಸಿ, ಮಕ್ಕಳ ಹಿಂದಿನ ವರುಷದ ಶಾಲಾ ಪುಸ್ತಕಗಳ ಮಿಕ್ಕ ಖಾಲಿ ಹಾಳೆಗಳನ್ನು ಒಂದುಗೂಡಿಸಿ ಒಂದು ಪುಸ್ತಕದ ರೂಪು ಕೊಟ್ಟು ಅದರಲ್ಲಿ ಸ್ವಂತ ಟಿಪ್ಪಣಿ ಬರೆದು ಮತ್ತೇ ಲೈಬ್ರರಿಗೆ ಹೋಗಿ 4 ಪುಸ್ತಕಗಳನ್ನು ತರುವುದೊಂದೇ  ಅವರಿಗಿದ್ದ ಹವ್ಯಾಸ. ಅವರು ಎಂದೂ ಗ್ರಂಥಾಲಯಕ್ಕೆ ಹದಿನೈದು ದಿನಕ್ಕೊಮ್ಮೆ ಹೋಗುವ ಪ್ರಕ್ರಿಯೆ ತಪ್ಪಿದ ಅನುಭವ ನಾನಂತೂ ನೋಡಿಯೇ ಇಲ್ಲ. ಮೇಲಾಗಿ ತಡವಾಗಿ ಹೋದರೆ ತಡ-ಶುಲ್ಕ (late-fee) ನಾಲ್ಕೂ ಪುಸ್ತಕಗಳಿಗೆ ಭರಿಸಬೇಕೆಂಬ ಯೋಚನೆ ಬೇರೆ ಅವರಿಗಿತ್ತು. ಬಸ್ ನಂಬರ್ 11 ನಮ್ಮ ಮನೆಯ ಎದುರಿಗಿದ್ದ ಬಸ್ ನಿಲ್ದಾಣಕ್ಕೆ ಗಂಟೆಗೊಮ್ಮೆ ಬರುತ್ತಿತ್ತು. ನಾನೂ ಕೂಡ ಬೇಸಿಗೆ ರಜೆ ಮತ್ತು ದಸರೆಯ ರಜಾ ದಿನಗಳಲ್ಲಿ ಪ್ರತಿ ಸಲವೂ ಅವರೊಟ್ಟಿಗೆ ಹೋಗುತ್ತಿದ್ದೆ. ಅಪ್ಪ ಮೊದಲು ತನಗೆ ಬೇಕಾದ ಪುಸ್ತಕಗಳನ್ನು ಅನುಕ್ರಮ (index) ದಲ್ಲಿ ಹುಡುಕಿ ನಂತರ ಪುಸ್ತಕಗಳನ್ನು ಇಟ್ಟಿರುವ ಕಪಾಟು (shelf) ಇದ್ದ ರೂಮಿಗೆ ತಲುಪಿ  ಪುಸ್ತಕಗಳ ವಿಶಯಸೂಚಿಯನ್ನು ಗಮನಿಸಿ ನಂತರ ಪುಸ್ತಕಗಳನ್ನು ಆರಿಸುತ್ತಿದ್ದರು. ಹೀಗಾಗಿ ಅಪ್ಪ ಸುಮಾರು ಒಂದೂವರೆಯಿಂದ ಎರಡು ಗಂಟೆ ಸಮಯ ಗ್ರಂಥಾಲಯದಲ್ಲಿ ಕಳೆಯುತ್ತಿದ್ದರು. ಈ ಸಮಯದಲ್ಲಿ ನಾನು ನನಗೆ ಇಷ್ಟವಾದ  ಕೈಲಾಸಂ ಮತ್ತು ರಾಜರತ್ನಂ ಪುಸ್ತಕಗಳನ್ನು ಓದುತ್ತಿದ್ದೆ. ನನಗೋಸ್ಕರ ಮನೆಗೆ ವಾಪಸ್ಸು ಬರುವಾಗ ಬಸ್ಸಿನಲ್ಲೇ ಬರುತ್ತಿದ್ದರು. ಇಲ್ಲವೆಂದರೆ ಹಿಂತಿರುಗುವಾಗ ಎಷ್ಟೋ ಬಾರಿ ನಡೆದೇ ಬರುತ್ತಿದ್ದನ್ನು ಸಾಕಷ್ಟು ಸಲ ನಾವೆಲ್ಲ ನೋಡಿದ್ದೆವು. ಈ ಕಾರಣಕ್ಕಾಗಿ ಅಮ್ಮ ಎಷ್ಟೋ ಬಾರಿ ಅಪ್ಪನನ್ನು ಬೈದಿದ್ದರು ಕೂಡ. 

ಅತ್ಯಂತ ಸರಳ ಜೀವಿ ಅಪ್ಪ ಏನನ್ನೂ ತನಗೋಸ್ಕರ ಕೇಳಿದವರೇ ಅಲ್ಲ. ಒಂದೇ ಒಂದು ಬಟ್ಟೆ ಅಥವಾ ಚಪ್ಪಲಿ ಏನೂ ಅವರಾಗಿಯೇ ಕೊಂಡಿದ್ದು ನಾವ್ಯಾರೂ ನೋಡೇ ಇರಲಿಲ್ಲ. ಅಪ್ಪನ ಪಂಚೆ ಮತ್ತು ಅಂಗಿಯ ಬಟ್ಟೆಯನ್ನೂ  ಸಹ ಅಮ್ಮನೇ ಅಥವಾ ಹಿರಿಯ ಅಕ್ಕನೇ ತಂದು ಹಳೆಯ ಜುಬ್ಬಾ ಅಳತೆ ಕೊಟ್ಟು ಹೊಲಿಸುತ್ತಿದ್ದರು. ಕಚ್ಚೆ ಪಂಚೆ ಉಡುತ್ತಿದ್ದಿದ್ದರಿಂದ ಪ್ಯಾಂಟು ಹೋಲಿಸುವ ಗೋಜು ಕೂಡ ಇರಲಿಲ್ಲ. ಆದರೆ  ಮದುವೆಗೆ ಹೊಸ ಟೋಪಿ ಕೊಳ್ಳಲು ಅಮ್ಮ ಮರೆತಿದ್ದರು. ಬೀಗರ ಮುಂದೆ ಮದುವೆಯ ಸಮಯದಲ್ಲಿ ಹೊಸ ಟೋಪಿ ಇದ್ದರೆ ಒಳಿತು ಎಂದು ಭಾವಿಸಿ ಒಂದೂವರೆ ಆಣೆ ಗಲ್ಲಿಗೆ ಒಬ್ಬರೇ ನಡೆದು ಹೋಗಿ ಹೊಸ ಟೋಪಿ ಖರೀದಿಸಿದ್ದರು. ನಡೆದು ಏಕೆ ಹೋಗಿದ್ದರೆಂದರೆ ಟೋಪಿಯ ಬೆಲೆ ತುಂಬಾ ಕಡಿಮೆ, ಬಸ್ಸಿನ ಟಿಕೆಟ್ ಖರ್ಚು ಬೇರೆ ಇದಕ್ಕೆ ಏಕೆ ಎಂದು ಯೋಚಿಸಿರಬೇಕು. ಈ ಟೋಪಿ ತಮಗಾಗಿ ಅಲ್ಲದಿದ್ದರೂ ಇತರರ ಮುಂದೆ ತನ್ನ ಹಳೆಯ ಟೋಪಿಯಿಂದ ನಮ್ಮೆಲ್ಲರ ಪ್ರತಿಷ್ಠೆ ಕಡಿಮೆಯಾಗದಿರಲಿ ಎಂದು ಈ ನಿರ್ಧಾರ ತೆಗೆದುಕೊಂಡಿದ್ದರಬೇಕಲ್ಲವೇ?
***
My father played a significant role in supporting me during my studies, providing me with coaching and guidance.

The values and character of my parents had a profound impact on every family member. Their behaviors, thoughts, and principles were instilled in us from a young age, becoming an integral part of our being.

I was particularly inspired by my father's simplicity and my mother's ability to adjust and compromise in life. These qualities have had a lasting impact on my life.

Later, during the initial stages of my employment, I underwent a transformation, adopting a lifestyle that valued self-dependence and simplicity.
***

end- ನಡೆದದ್ದು written ಸಂಟೈಂ ಇನ್ August 2020
.


go back to... 
    click--> LINKS TO ARTICLES 

...


.

No comments:

Post a Comment