Monday, 30 December 2019

SOUNDARYA ಸೌಂದರ್ಯ 🤔😀



Imaginative story - Time 1970s


ಸೌಂದರ್ಯ - ಕಥೆ 


ಎರಡನೇ ಪಿಯುಸಿಯಲ್ಲಿ ಶೇಕಡಾ 80ರಷ್ಟು ಅಂಕಗಳನ್ನು ಗಳಿಸಿದ್ದರೂ, ಇಂಜಿನಿಯರಿಂಗ್ ಸೇರಲು ನನ್ನ ಮನಸ್ಸು ಒಪ್ಪಲಿಲ್ಲ. ಆದ್ದರಿಂದ ನಾನು ಬಿ.ಎಸ್ಸಿ ಮೊದಲ ವರ್ಷಕ್ಕೆ ಸೇರಿದೆ. ನಮ್ಮ ತಂದೆಯವರ ಆರ್ಥಿಕ ಸ್ಥಿತಿಯನ್ನು ಗಮನಿಸಿದಾಗ, ಅವರಿಗೆ ಹೊರೆಯಾಗಲು ನನ್ನ ಮನಸ್ಸು ಒಪ್ಪಲಿಲ್ಲ. ಬಿ.ಎಸ್ಸಿ ಸೇರಿದರೆ ವಿದ್ಯಾರ್ಥಿವೇತನ ಸಿಗುವುದು ಖಚಿತವಾಗಿತ್ತು, ಮತ್ತು ನನಗೆ ಅದರ ಅಗತ್ಯವೂ ಇತ್ತು. ವಿದ್ಯಾರ್ಥಿವೇತನದ ಸಹಾಯದಿಂದ ಎಂ.ಎಸ್ಸಿ ಮುಗಿಸಿ, ನೆಟ್ ಪರೀಕ್ಷೆ ತೆಗೆದುಕೊಂಡು ಅಧ್ಯಾಪಕನಾಗಬೇಕೆಂಬ ಮನದಾಸೆ ನನ್ನನ್ನು ಕಾಡುತ್ತಿತ್ತು. ನನ್ನ ಅಣ್ಣ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿ ಒಂದು ವರ್ಷವಾಗಿತ್ತು. ಆತ ಆರ್ಥಿಕವಾಗಿ ಸಹಾಯ ಮಾಡುವ ಸ್ಥಿತಿಯಲ್ಲಿದ್ದರೂ, ನನ್ನ ಸ್ವಾಭಿಮಾನದಿಂದ ಅವನ ಸಹಾಯ ಪಡೆಯಲು ಮನಸ್ಸು ಒಪ್ಪಲಿಲ್ಲ. ನನ್ನ ಭವಿಷ್ಯದ ಕನಸುಗಳನ್ನು ನನಸಾಗಿಸಿಕೊಳ್ಳಲು ನಾನು ಏಕಾಂಗಿಯಾಗಿ ಹೋರಾಡಬೇಕೆಂದು ಮನಸ್ಸು ಹೇಳುತ್ತಿತ್ತು.

ತರಗತಿಗಳು ಪ್ರಾರಂಭವಾಗಿ ಸುಮಾರು ನಾಲ್ಕೈದು ದಿನಗಳಾಗಿರಬಹುದು. ತರಗತಿ ಇಲ್ಲದ ಸಮಯದಲ್ಲಿ ನನ್ನ ಇಬ್ಬರು ಆಪ್ತ ಸ್ನೇಹಿತರ ಜೊತೆಗೆ ಕಾಲೇಜಿನ ಮುಖ್ಯದ್ವಾರದ ಹೊರಗೆ ನಿಲ್ಲುತ್ತಿದ್ದೆವು. ಕಾಲೇಜಿಗೆ ಬರುವ ಎಲ್ಲಾ ಹುಡುಗಿಯರ ಮೇಲೆ ನಮ್ಮ ಕಣ್ಣುಗಳು ತಾನಾಗಿಯೇ ಕೇಂದ್ರೀಕೃತವಾಗುತ್ತಿದ್ದವು. ಕಾಲೇಜಿನ ಮುಖ್ಯ ಪ್ರಾಚಾರ್ಯರು, ಇತರ ಸಿಬ್ಬಂದಿ ವರ್ಗದವರು ಮತ್ತು ಮನೆಯ ಹಿರಿಯರ ಭಯದಿಂದ ಹುಡುಗಿಯರ ಮುಂದೆ ಯಾವ ಟೀಕೆಗಳನ್ನು ಮಾಡದೆ ಸಭ್ಯತೆ ತೋರಿದರೂ, ನಮ್ಮ ಯೋಚನೆಗಳೆಲ್ಲ ಯಾವಾಗಲಾದರೂ ಒಂದು ಹುಡುಗಿಯ ಜೊತೆಗೆ ಸ್ನೇಹವಾದರೆ ಸಾಕು ಎಂಬಂತಿತ್ತು.

ನನ್ನ ಇಬ್ಬರು ಆಪ್ತ ಸ್ನೇಹಿತರ ಜೊತೆಗಿನ ಸ್ನೇಹ ಕೇವಲ ಕಾಲೇಜಿನ ಓದಿಗೆ ಸೀಮಿತವಾಗಿರದೆ, ಒಬ್ಬರಿಗೊಬ್ಬರು ಧೈರ್ಯ ತುಂಬುವುದು, ಸಹಾಯ ಹಸ್ತ ನೀಡುವುದು ಮುಂತಾದವುಗಳಿಂದ ನಮ್ಮ ಸ್ನೇಹ ಅಚಲವಾಗಿ, ನಿರ್ಮಲವಾಗಿ ಮತ್ತು ಗಾಢವಾಗಿ ಬೆಳೆಯುತ್ತಾ ಹೋಯಿತು. ಪ್ರಿ-ಯೂನಿವರ್ಸಿಟಿಯಲ್ಲಿ ಯಾವುದೇ ಹುಡುಗಿಯ ಸ್ನೇಹ ಮಾಡಿರಲಿಲ್ಲ. ಈ ವರ್ಷವಾದರೂ ಸ್ವಲ್ಪ ಸಾಧನೆ ಮಾಡಬೇಕೆಂಬ ನನ್ನ ಬಯಕೆಯನ್ನು ಸ್ನೇಹಿತರ ಮುಂದೆ ಇಟ್ಟೆ. ಕೂಡಲೇ ಸ್ನೇಹಿತರಿಬ್ಬರೂ ಏನು ಸಹಾಯ ಬೇಕೆಂದರೂ ಮಾಡಲು ಸಿದ್ಧರಾದರು. ನನ್ನ ಕನಸುಗಳನ್ನ ನನಸಾಗಿಸಲು ಸ್ನೇಹಿತರ ಬೆಂಬಲ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು.

ಮಾರನೆಯ ದಿನ ಶನಿವಾರ. ಬೆಳಿಗ್ಗೆ ತರಗತಿ ಪ್ರಾರಂಭವಾಗುವ ಮುಂಚೆ ಎಂದಿನಂತೆ ಕಾಲೇಜಿನ ಹೊರಗೆ ಹರಟೆ ಹೊಡೆಯುತ್ತಾ ನಿಂತಿದ್ದೆವು. ಆಗ ಬಂದು ನಿಂತ ರಿಕ್ಷಾ ನಮ್ಮೆಲ್ಲರ ಗಮನವನ್ನು ಸೆಳೆಯಿತು. ಸುಂದರ ಯುವತಿಯೊಬ್ಬಳು ಹಿರಿಯರೊಡನೆ ರಿಕ್ಷಾದಿಂದ ಕೆಳಗಿಳಿಯುತ್ತಲೇ ನನ್ನ ಕಣ್ಣುಗಳು ಅವಳನ್ನು ನೋಡಿ ನಾನು ಮನಸ್ಸಿನಲ್ಲಿ ಸೃಷ್ಟಿಸಿ ಹೆಸರಿಸಿದ್ದ ‘ಸೌಂದರ್ಯ’ಳನ್ನು ಕಂಡಂತೆ ಭಾಸವಾಗಿ ನನ್ನ ಮನ ಮಿಡಿಯಿತು. ಸೌಂದರ್ಯಳ ತಂದೆಯವರು ನನ್ನನ್ನು ನೋಡಿ ನಕ್ಕಾಗ ನನ್ನ ಸ್ನೇಹಿತರಿಬ್ಬರೂ ದಂಗಾದರು. ಸೌಂದರ್ಯಳ ತಂದೆಯವರನ್ನು ನನ್ನ ತಂದೆಯವರು ಮಾರುಕಟ್ಟೆಯಲ್ಲಿ ಭೇಟಿಯಾದಾಗ ಮಾತನಾಡಿಸಿದ ನೆನಪು ನಮಗಿಬ್ಬರಿಗೂ ಇತ್ತು. ಇದೇ ಕಾರಣಕ್ಕೆ ಅವರು ನನ್ನನ್ನು ನೋಡಿ ಪ್ರತಿಕ್ರಿಯಿಸಿದ್ದರು. ಸೌಂದರ್ಯಳ ತಂದೆಯವರಿಂದ ಆ ಯುವತಿ ಮೊದಲ ಬಿ.ಎಸ್ಸಿಗೆ ನನ್ನದೇ ವಿಷಯಗಳನ್ನು ತೆಗೆದುಕೊಂಡು ಸೇರಿದ್ದಾಳೆಂದು ತಿಳಿಯಿತು. ಅವರು ಆ ಯುವತಿಯನ್ನು ನನಗೆ ಪರಿಚಯಿಸಿದಾಗ ಅವಳ ಹೆಸರನ್ನು ನೆನಪಿಟ್ಟುಕೊಳ್ಳಲು ಇಷ್ಟಪಡದೆ ನಾನಾಗಲೇ ಅವಳಿಗೆ ‘ಸೌಂದರ್ಯ’ ಎಂದು ಹೆಸರಿಟ್ಟಿದ್ದೆ. ‘ನನ್ನ ತರಗತಿಗೆ ಸ್ವಾಗತ. ಇನ್ನು ಹದಿನೈದು ನಿಮಿಷಗಳಲ್ಲಿ ಭೌತಶಾಸ್ತ್ರದ ಉಪನ್ಯಾಸ ಪ್ರಾರಂಭವಾಗುತ್ತದೆ’ ಎಂದು ಸೌಂದರ್ಯಳಿಗೆ ಹೇಳಿದಾಗ ಅವರಿಬ್ಬರೂ ಪ್ರಾಂಶುಪಾಲರನ್ನು ಭೇಟಿ ಮಾಡಲು ನನಗೆ ವಿದಾಯ ಹೇಳಿ ಹೊರಟರು.

ನನ್ನನ್ನು ಗಮನಿಸಿದ ನನ್ನ ಆಪ್ತ ಸ್ನೇಹಿತರು 'ಏನಪ್ಪಾ ನಿನ್ನ ಅದೃಷ್ಟ ಖುಲಾಯಿಸಿತು' ಎಂದಾಗ ನಾಚಿ ನೀರಾದೆ. ಸ್ನೇಹಿತರಿಬ್ಬರೂ 'ನಿನ್ನ ಕನಸು ನನಸಾಗುವ ಸಮಯ ಬಂದೇ ಬಿಟ್ಟಿತು. ನಿನಗೇನಾದರೂ ಸಹಾಯ ಬೇಕಾದರೂ ನಾವು ಸಿದ್ಧ' ಎಂದಾಗ ಸದ್ಯ ಅವರಿಬ್ಬರೂ ಇವಳ ಹಿಂದೆ ಬಿದ್ದಿಲ್ಲವಲ್ಲ ಎಂಬ ಸಂತೋಷವಾಯಿತು. ನನ್ನ ಕನಸಿನ ರಾಣಿಯನ್ನು ಕಂಡ ಆ ಕ್ಷಣ ನನ್ನ ಹೃದಯದಲ್ಲಿ ಹೊಸ ಭರವಸೆ ಮೂಡಿಸಿತು.

ಅಂದು ಇಡೀ ದಿನ ಯಾವ ಪಾಠವೂ ತಲೆಗೆ ಹೋಗಲಿಲ್ಲ. ಕೊನೆಯ ತರಗತಿಯಿಂದ ನನ್ನ ಸೌಂದರ್ಯ ಹೊರಬಂದಾಗ ಅವಳನ್ನು ಮಾತನಾಡಿಸಲು, 'ತರಗತಿ ಹೇಗಿತ್ತು?' ಎಂದು ಕೇಳಿದೆ. ಅವಳೇನೋ ಹೇಳಲು ಇಷ್ಟಪಡದೆ ಸುಮ್ಮನೆ ನಕ್ಕಳು. 'ನಿಮಗೆ ಟಿಪ್ಪಣಿಗಳು ಬೇಕಾದರೆ ನಾನು ಕೊಡುತ್ತೇನೆ' ಎಂದಾಗ, 'ಬೇಡ, ಧನ್ಯವಾದ' ಎಂದು ಹೇಳಿದಳು. ಆಗ ಏನು ಹೇಳಬೇಕೆಂದು ತೋಚದೆ, 'ಸರಿ, ಸೋಮವಾರ ಸಿಗೋಣ' ಎಂದು ವಿದಾಯ ಹೇಳಿದೆ. ಅವಳು ‘ಹೌದು’ ಎಂದಿದ್ದರೆ, ಮಾತು ಮುಂದುವರೆಯುತ್ತಿತ್ತೇನೋ.

ನನ್ನ ತರಗತಿಯಲ್ಲಿದ್ದ ಇತರರು, 'ಏನಪ್ಪಾ ಇವನು ಆ ಹುಡುಗಿ ಬಂದ ಮೊದಲ ದಿನವೇ ಲೈನ್ ಹೊಡೆಯಲು ಹೊರಟಿದ್ದಾನೆ' ಎಂದು ಮಾತನಾಡಿಕೊಳ್ಳುತ್ತಿದ್ದರು. ಆಗ ನನ್ನ ಸ್ನೇಹಿತರಿಬ್ಬರೂ ಆ ಹುಡುಗಿ ಅವನಿಗೆ ದೂರದ ಸಂಬಂಧಿ ಎಂದು ಹೇಳಿದ್ದು ನನಗೆ ಕೇಳಿಸಿತು.

ಮನೆಗೆ ಹೋಗಿ ಪುಸ್ತಕಗಳನ್ನು ಮೇಜಿನ ಮೇಲೆ ಎಸೆದು, ಮುಖ ತೊಳೆದು, ತಿಂಡಿ ತಿಂದು, ಕಾಫಿ ಕುಡಿದು ಸಂಜೆ ಹಾಗೆಯೇ ತಿರುಗಾಡಲು ಹೊರಟೆ. ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವ ಅರಿವಿಲ್ಲದೆ ಸುಮ್ಮನೆ ಒಬ್ಬನೇ ನಡೆಯುತ್ತಿದ್ದೆ. ಮನಸ್ಸಿನಲ್ಲಿ ತಳಮಳ, ಏನೇನೋ ಯೋಚನೆಗಳು.

ಸೋಮವಾರ ನನ್ನ ಸೌಂದರ್ಯಳನ್ನು ಹೇಗೆ ಭೇಟಿ ಮಾಡುವುದು, ಭೇಟಿಯ ಕಾರಣ ಏನಿರಬೇಕು, ಅವಳಿಗೆ ಏನು ಹೇಳಬೇಕು, ನಂತರದ ಭೇಟಿಗಳಿಗೆ ಏನು ಮಾತನಾಡಬೇಕು, ಅದಕ್ಕವಳು ಏನು ಉತ್ತರಗಳನ್ನು ಕೊಡಬಹುದು, ಆ ಉತ್ತರಗಳಿಗೆ ನನ್ನ ಪ್ರತ್ಯುತ್ತರಗಳೇನಿರಬೇಕು, ಇಂದಿನಂತೆ ಅರ್ಧ ನಿಮಿಷದಲ್ಲೇ ಮಾತು ಮುಗಿಯಲು ಬಿಡಬಾರದು, ಅವಳು ಪ್ರತಿದಿನ ಸಂಜೆ ಯಾರ್ಯಾರ ಮನೆಗಳಿಗೆ ಹೋಗುತ್ತಾಳೆ, ಅವಳ ಮನೆ ನನ್ನ ಮನೆಯಿಂದ ಎಷ್ಟು ದೂರವಿರಬಹುದು, ನಾನು ಹೇಗೆ ಅವಳ ಮನೆಗೆ ಹೋಗಬಹುದು, ಅವಳ ಮನೆಗೆ ನನ್ನನ್ನು ಕರೆಯುವಂತೆ ಏನು ಮಾಡಬೇಕು, ಅವಳು ಪ್ರತಿ ಗುರುವಾರ ರಾಘವೇಂದ್ರ ಸ್ವಾಮಿ ಗುಡಿಗೆ, ಶನಿವಾರ ಮಾರುತಿ ಗುಡಿಗೆ ಹೋಗುತ್ತಾಳೋ, ಹೋದರೆ ಯಾವ ಜಾಗದಲ್ಲಿರುವ ಯಾವ ಗುಡಿಗೆ ಹೋಗುತ್ತಾಳೆ, ಎಷ್ಟು ಹೊತ್ತಿಗೆ ಹೋಗುತ್ತಾಳೆ, ಯಾರ ಜೊತೆಗೆ ಹೋಗುತ್ತಾಳೆ, ನಾನು ಅಲ್ಲಿಗೆ ಹೋಗಿ ಮಾತನಾಡಿಸಿದರೆ ಅವಳ ಜೊತೆಗಿರುವವರಿಂದ ಏನಾದರೂ ತೊಂದರೆಗಳಿವೆಯೇ, ಅವಳ ಸ್ನೇಹಿತೆಯರು ಯಾರ್ಯಾರು, ಅವಳು ಅವರ ಮನೆಗೆ ಹೋಗುತ್ತಾಳೋ ಅಥವಾ ಅವರೇ ಇವಳ ಮನೆಗೆ ಬರುತ್ತಾರೋ, ಯಾವ ಬಳೆ ಅಂಗಡಿ, ಯಾವ ಫ್ಯಾನ್ಸಿ ಅಂಗಡಿಗೆ ಹೋಗುತ್ತಾಳೆ, ಅವಳ ಆಸಕ್ತಿಗಳೇನು, ಅವಳ ತಂದೆ ಮತ್ತು ತಾಯಿಯವರು ನಿಷ್ಠುರ ಸ್ವಭಾವದವರೇ, ಅವಳ ತಂದೆಯವರು ನನಗೆ ಕಾಲೇಜಿನಲ್ಲಿ ಮಾತನಾಡಿಸಿದ ಬಗ್ಗೆ ನನ್ನ ತಂದೆಯವರಿಗೆ ಹೇಳಬೇಕೋ ಬೇಡವೋ, ಹೇಳಿದರೆ ಕೆಲಸ ಕೆಡುತ್ತದೆಯೋ ಅಥವಾ ಅನುಕೂಲವಾಗುತ್ತದೋ, ನನ್ನ ಅಮ್ಮನಿಗೆ ಅವಳ ಅಮ್ಮನ ಪರಿಚಯವಿದೆಯೋ, ಏನು ಮಾಡಿದರೆ ಅವಳ ಜೊತೆ ನನ್ನ ಸ್ನೇಹವನ್ನು ಗಟ್ಟಿ ಮಾಡಿಕೊಳ್ಳಬಹುದು, ಏನೆಲ್ಲಾ ಯೋಚನೆಗಳು ತಲೆಯಲ್ಲಿ ಹಾದುಹೋಗಿ ಎಲ್ಲಿಗೆ ನಡೆಯುತ್ತಿದ್ದೇನೆ ಎನ್ನುವ ಅರಿವೇ ಮೂಡಲಿಲ್ಲ. ಮನೆಗೆ ವಾಪಸ್ಸು ಬಂದಾಗ ಆಗಲೇ ರಾತ್ರಿ ಏಳೂಮುಕ್ಕಾಲು ಆಗಿತ್ತು. ಓದಲು ಮನಸ್ಸಿಲ್ಲ, ಊಟ ಕೂಡ ಸೇರುತ್ತಿಲ್ಲ, ಹಾಸಿಗೆಯ ಮೇಲೆ ಮಲಗಿ ನಿದ್ರಾದೇವಿಯ ಆಹ್ವಾನಕ್ಕೆ ಹೊರಳಾಡುತ್ತಾ ಇದ್ದೆ. ಎಷ್ಟು ಹೊತ್ತಾದರೂ ನಿದ್ರೆ ಬರಲೇ ಇಲ್ಲ. ಬರೀ ಯೋಚನೆ, ಹೀಗೆ ಮಾಡಬೇಕು, ಹಾಗೆ ಮಾಡಬೇಕು, ಹೀಗಾದರೆ ಹೇಗೆ, ಹಾಗಾದರೆ ಹೇಗೆ... ಕೊನೆಗೂ ರಾತ್ರಿ ಮಂಪರು ಹತ್ತಿ ನಿದ್ರೆ ಬಂದದ್ದು ಗೊತ್ತಾಗಲಿಲ್ಲ. ನನ್ನ ಮನಸ್ಸು ಅವಳನ್ನು ಹೇಗೆ ಪಡೆಯಬೇಕೆಂದು ಹಂಬಲಿಸುತ್ತಿತ್ತು.

ನಮ್ಮ ಮನೆಯ ದೊಡ್ಡ ಗಡಿಯಾರ ಬೆಳಿಗ್ಗೆ ಎಂಟು ಬಾರಿಸಿದಾಗ ನನಗೆ ಎಚ್ಚರವಾಯಿತು. ಕ್ಷಣಾರ್ಧದಲ್ಲಿ ಕಣ್ಣು ತೆರೆದೆ. ಅಮ್ಮ ಎದುರಿಗೆ ನಿಂತು, 'ಎಷ್ಟು ಸಲ ಕರೆಯಬೇಕು ನಿನ್ನನ್ನು? ಮೂವತ್ತು ನಿಮಿಷದಲ್ಲಿ ಹೊರಡಲು ಸಿದ್ಧವಾಗು' ಎಂದು ಆಜ್ಞಾಪಿಸಿದಾಗ, ಮೌನವಾಗಿ ಸ್ನಾನಗೃಹಕ್ಕೆ ಹೋದೆ. ಗಡಿಯಾರದ ಎಂಟರ ಮುಳ್ಳು ನನ್ನ ಹೃದಯವನ್ನು ಚುಚ್ಚಿ ನೋವುಂಟುಮಾಡಿದಂತೆ ಆಗ ನನಗೆ ಅನಿಸಲಿಲ್ಲ.

ರಾಹುಕಾಲ ಸಾಯಂಕಾಲ 4.30ರಿಂದ ಪ್ರಾರಂಭವಾಗುವುದರಿಂದ, ಬೆಳಿಗ್ಗೆಯೇ ಕಾರ್ಯಕ್ರಮವನ್ನು ನಿರ್ಧರಿಸಿದ್ದರು. ನನ್ನ ತಂದೆ, ತಾಯಿ ಮತ್ತು ಅಣ್ಣ ಮಾತ್ರ ಹೋಗುವುದರಿಂದ, ಒಳ್ಳೆಯ ಕಾರ್ಯಕ್ಕೆ ನನ್ನನ್ನೂ ಕರೆದುಕೊಂಡು ಹೋಗಲು ನಿರ್ಧರಿಸಿದ್ದರು. ನನಗೆ ಮನಸ್ಸಿಲ್ಲದಿದ್ದರೂ, ತಂದೆಯ ಮಾತನ್ನು ವಿರೋಧಿಸಲು ಧೈರ್ಯವಿಲ್ಲದೆ ಸಿದ್ಧನಾದೆ. ಆ ದಿನ ನನ್ನ ಭವಿಷ್ಯದ ದಾರಿ ಬದಲಾಗಲಿದೆ ಎಂದು ಊಹಿಸಿರಲಿಲ್ಲ.

ಬೆಳಿಗ್ಗೆ ಒಂಬತ್ತು ಗಂಟೆಗೆ ಸರಿಯಾಗಿ ಟ್ಯಾಕ್ಸಿ ನಮ್ಮ ಮನೆಯ ಮುಂದೆ ಬಂದು ನಿಂತಿತು. ಮನಸ್ಸಿನಲ್ಲಿ ಇನ್ನೂ ಸೌಂದರ್ಯಳ ನೆನಪೇ ಇದ್ದಿದ್ದರಿಂದ, ಏನೂ ಮಾತನಾಡದೆ ಸುಮ್ಮನೆ ಎಲ್ಲರ ಜೊತೆಗೆ ಟ್ಯಾಕ್ಸಿಯಲ್ಲಿ ಕುಳಿತೆ. ಐದೇ ನಿಮಿಷದಲ್ಲಿ ಟ್ಯಾಕ್ಸಿ ಇನ್ನೊಂದು ಮನೆಯ ಮುಂದೆ ನಿಂತಿತು. ಆ ಮನೆಯ ಯಜಮಾನಿ ನಾವು ಬರುವುದನ್ನೇ ಕಾಯುತ್ತಿದ್ದಂತೆ ಮನೆಯ ಮುಂದೆ ನಿಂತಿದ್ದರು. ‘ಒಳಗೆ ಬನ್ನಿ’ ಎಂದು ಆಹ್ವಾನಿಸುತ್ತಾ ಮನೆಯ ಯಜಮಾನರನ್ನು ಕರೆದರು. ಮನೆಯ ಯಜಮಾನರು ಹೊರಗೆ ಬಂದಾಗ ಅವರನ್ನು ನೋಡಿ ನನಗೆ ಆಘಾತವಾಗಿ ಸ್ಮೃತಿ ತಪ್ಪಿದವನಂತಾಯಿತು. ಅವರು ಬೇರೆಯಾರೂ ಅಲ್ಲ, ಸೌಂದರ್ಯಳ ತಂದೆಯಾಗಿದ್ದರು.

ನಮ್ಮನ್ನೆಲ್ಲಾ ಜಗುಲಿಯಿಂದ ಒಳಗೆ ಕರೆದುಕೊಂಡು ಹೋಗಿ ಸೋಫಾದ ಮೇಲೆ ಕುಳಿತುಕೊಳ್ಳಲು ಹೇಳಿದರು. ನಾನು ಅಲ್ಲಿದ್ದ ನೀರಿನ ಲೋಟವನ್ನು ಕೈಗೆತ್ತಿಕೊಂಡು ನೀರು ಕುಡಿಯುತ್ತಿರುವಾಗಲೇ ಸೌಂದರ್ಯಳ ತಂದೆಯವರು ನನ್ನ ತಂದೆಯವರಿಗೆ, 'ನಿಮ್ಮ ಎರಡನೇ ಮಗನನ್ನು ನಿನ್ನೆಯೇ ಕಾಲೇಜಿನಲ್ಲಿ ಮಾತನಾಡಿಸಿದೆ, ಬಹಳ ಒಳ್ಳೆಯ ಹುಡುಗ' ಎಂದು ಹೊಗಳಿದರು. ಸ್ವಲ್ಪ ಹೊತ್ತಿಗೆ ಸಜ್ಜಿಗೆ, ಉಪ್ಪಿಟ್ಟು ಬಂದರೂ, ತಿನ್ನಲು ಮನಸ್ಸಿಲ್ಲದೆ ತಲೆನೋವು ಎಂದು ಹೇಳಿ ಬಲವಂತದಿಂದ ಕಾಫಿ ಕುಡಿದೆ. ಸೌಂದರ್ಯ ರೇಷ್ಮೆ ಸೀರೆಯುಟ್ಟು ತಾಯಿಯ ಜೊತೆಗೆ ಒಳಗಿನಿಂದ ಬಂದು ತಲೆ ತಗ್ಗಿಸಿ ಕುಳಿತಾಗ, ನಾನು ತಲೆಯೆತ್ತದೆ ಅಲ್ಲಿದ್ದ ವಾರಪತ್ರಿಕೆಯ ಮೇಲೆ ಸುಮ್ಮನೆ ಕಣ್ಣು ಹಾಯಿಸುತ್ತಿರುವಂತೆ ನಟಿಸುತ್ತಿದ್ದೆ.

ಮನೆಯಿಂದ ಹೊರಗೆ ಮತ್ತೆ ಟ್ಯಾಕ್ಸಿಯಲ್ಲಿ ಕುಳಿತಾಗ, ನನ್ನ ತಂದೆಯವರು ಮದುವೆಯನ್ನು ಮಾಘ ಮಾಸದಲ್ಲಿ ಮಾಡೋಣ ಎಂದರು. ಆಗ ನನ್ನ ತಾಯಿಯವರು, 'ನಿಶ್ಚಿತಾರ್ಥವನ್ನು ಮಾತ್ರ ಕೂಡಲೇ ಮಾಡಿ ಮುಗಿಸೋಣ. ಏಕೆಂದರೆ, ನಂತರ ಹುಡುಗ-ಹುಡುಗಿ ಇಬ್ಬರೂ ಎಲ್ಲಿ ಬೇಕಾದರೂ ತಿರುಗಾಡಬಹುದು, ಯಾರೂ ಬೆರಳು ತೋರಿಸುವುದಿಲ್ಲ, ನಿಂದನೆಗೂ ಅವಕಾಶವಿರುವುದಿಲ್ಲ' ಎಂದು ವಿವರಿಸುತ್ತಾ, 'ಹೇಗಿದ್ದರೂ ಅವನು ಅಮೆರಿಕಕ್ಕೆ ಹೋಗುತ್ತಿದ್ದಾನೆ, ಸದ್ಯಕ್ಕೆ ಅವನ ಬಗ್ಗೆ ಚಿಂತೆ ಬೇಡ. ಆ ಹುಡುಗಿ ಮತ್ತೆ ಕಾಲೇಜಿಗೆ ಹೋಗಬೇಕೇನು?' ಎಂದು ಹೇಳುತ್ತಿದ್ದರು. ಕೇಳಲು ಮನಸ್ಸಿಲ್ಲದಿದ್ದರೂ ಕೇಳಬೇಕಾಯಿತು. ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಮಾಧಾನಪಡಿಸಲು ಯಾರೂ ನನ್ನ ಜೊತೆಗಿರಲಿಲ್ಲ. ನನ್ನ ಮನಸ್ಸಿನಲ್ಲಿ ಸೌಂದರ್ಯ ವಿಮಾನದಲ್ಲಿ ಕುಳಿತು ನನ್ನನ್ನು ನೋಡಿ ವಿದಾಯ ಹೇಳುತ್ತಿದ್ದಳು. ನನ್ನ ಕನಸುಗಳೆಲ್ಲಾ ಛಿದ್ರವಾದಂತೆ ಭಾಸವಾಯಿತು.

***

end- elloo ನಡೆದದ್ದು ಅಲ್ಲ imagination written sometime ಇನ್ 2002
.


go back to... 
    click--> LINKS TO ARTICLES 

...


No comments:

Post a Comment