Imaginative write-up
ಪ್ರಣಯ ಪಯಣ
"ಪ್ರಣಯ" ಎಂಬುದು ಬಹುತೇಕ ಎಲ್ಲರೂ ಇಷ್ಟಪಡುವ ಒಂದು ಭಾವನಾತ್ಮಕ ಅನುಭವ. ಪ್ರಣಯ, ಪ್ರೀತಿ, ಒಲುಮೆ, ಒಲವು, ಅನುರಾಗ, ಪ್ರೇಮ, ಅಕ್ಕರೆ, ಮೋಹ, ಮತ್ತು "ಲವ್" ಎಂಬ ಪದಗಳು ಯೌವ್ವನದಲ್ಲಿ ಸರ್ವೇಸಾಮಾನ್ಯವಾಗಿ ಎಲ್ಲ ಜೀವಿಗಳೂ ಅನುಭವಿಸುವ ಮತ್ತು ಬಯಸುವ ಭಾವನೆಗಳಾಗಿವೆ. ಆದರೆ "ಪಯಣ" ಎಂಬುದು ಜೀವನದ ಕೊನೆಯವರೆಗೂ ಇರುವ ಒಂದು ನಿರಂತರವಾದ ಪ್ರಕ್ರಿಯೆ. ಭೂಮಿಯಲ್ಲಿ ಜನಿಸಿದ ದಿನದಿಂದ ಈ ಪಯಣ ಪ್ರಾರಂಭವಾಗುತ್ತದೆ ಮತ್ತು ಮರಣದವರೆಗೂ ಇದು ಅನಿವಾರ್ಯವಾಗಿರುತ್ತದೆ. ಅಂದರೆ, ಈ ಜಗತ್ತಿನಲ್ಲಿ ಜೀವಂತವಾಗಿರುವ ಪ್ರತಿಯೊಂದು ಜೀವಿಗೂ ಪ್ರಾಣ ಹೋಗುವ ಭಯವಿದ್ದರೂ, ಪ್ರಾಣವಿರುವವರೆಗೂ ಈ ಪಯಣ ಇದ್ದೇ ಇರುತ್ತದೆ.
ಈ ಪಯಣವು ಕೇವಲ ಭೌತಿಕವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವುದನ್ನು ಮಾತ್ರ ಒಳಗೊಂಡಿರುವುದಿಲ್ಲ, ಬದಲಿಗೆ ಇದು ಜೀವನದ ಅನುಭವಗಳು, ಕಲಿಕೆಗಳು, ಸಂಬಂಧಗಳು ಮತ್ತು ಬೆಳವಣಿಗೆಯನ್ನು ಒಳಗೊಂಡಿರುವ ಒಂದು ಮಾನಸಿಕ ಮತ್ತು ಭಾವನಾತ್ಮಕ ಪ್ರಯಾಣವೂ ಆಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ವಿಶಿಷ್ಟವಾದ ಪಯಣವನ್ನು ಹೊಂದಿರುತ್ತಾನೆ, ಮತ್ತು ಈ ಪಯಣದಲ್ಲಿ ಸಂತೋಷ, ದುಃಖ, ಯಶಸ್ಸು ಮತ್ತು ವೈಫಲ್ಯಗಳು ಸೇರಿದಂತೆ ವಿವಿಧ ಅನುಭವಗಳನ್ನು ಎದುರಿಸಬೇಕಾಗುತ್ತದೆ.
ಪ್ರಣಯ ಮತ್ತು ಪಯಣ ಇವೆರಡೂ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಪ್ರಣಯವು ಜೀವನಕ್ಕೆ ಉತ್ಸಾಹ ಮತ್ತು ಸಂತೋಷವನ್ನು ನೀಡಿದರೆ, ಪಯಣವು ಜೀವನದ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಈ ಎರಡೂ ಅಂಶಗಳು ಜೀವನವನ್ನು ಸಂಪೂರ್ಣವಾಗಿ ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಅಗತ್ಯವಾಗಿವೆ.
ನಾನು ಹುಟ್ಟಿದ ದಿನದಿಂದ ಇಲ್ಲಿಯವರೆಗಿನ ನನ್ನ ಪಯಣ ಮತ್ತು ಯೌವ್ವನದ ಪ್ರಣಯದ ಬಗ್ಗೆ ಬರೆಯಲು ಹೊರಟರೆ, ಶ್ರೀ ಭೈರಪ್ಪನವರ 'ದಾಟು' ಕಾದಂಬರಿಯ ಪುಟಗಳನ್ನು ಮೀರಿಸುವಷ್ಟು ವಿಷಯಗಳಿವೆ. ಆದರೆ, ಓದುಗರು ಸಿಗುವುದು ಕಷ್ಟ. ನೀವು ಈ ಹೊಸ ಪುಸ್ತಕದ ಮೊದಲ ನಾಲ್ಕೈದು ಪುಟಗಳನ್ನು ಓದಿ, ಮಣಭಾರವಿರುವದರಿಂದ ಪುಸ್ತಕ ಬಿಸಾಕಿ ಮುಖ್ಯ ವಿಷಯಗಳನ್ನೇ ಓದಲು ಬಿಟ್ಟು ಬಿಡಬಹುದು.
ಬಹುಶಃ ನೀವು ಈಗ ಕೈಯಲ್ಲಿ ಪತ್ರಿಕೆ ಅಥವಾ ಮೊಬೈಲ್ ಹಿಡಿದು ನನ್ನ ಬರಹವನ್ನು ಓದುತ್ತಾ ಎಲ್ಲೋ ಪ್ರಯಾಣಿಸುತ್ತಿರಬಹುದೆಂದು ಊಹಿಸಿಕೊಳ್ಳಿ. ನಿಮ್ಮ ಪ್ರಯಾಣದ ಆಯಾಸವನ್ನು ಕಡಿಮೆ ಮಾಡಲು ನನ್ನ ಪ್ರಣಯ-ಪಯಣದ ಅನುಭವಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ಏನಂತೀರಾ ?
ಮತ್ತೇ.. ಯೋಚನೆ ಮಾಡಬೇಡಿ. ಬೇತಾಳ ಕತೆಗಳಂತೆ ನಿಮ್ಮನ್ನು ಕೊನೆಯಲ್ಲಿ ಯಾವ ಪ್ರಶೋತ್ತರಗಳನ್ನೂ ಕೇಳುವುದಿಲ್ಲ. ಪ್ರಶ್ನೆಗಳಿದ್ದರೂ, ನೀವು ಉತ್ತರಿಸಲು ಕಡ್ಡಾಯವೇನಿಲ್ಲ. ಒಂದು ವೇಳೆ ಪ್ರಶ್ನೆಗಳಿಗೆ ಉತ್ತರಿಸಲು ಬಯಸಿದರೂ, ನಿಮ್ಮ ಉತ್ತರ ತಪ್ಪಾದರೆ ತಲೆ ನೂರು ಹೋಳಾಗುವಂತಹ ಭಯ ಬೇಡ. ಆದರೂ, ಪ್ರಶ್ನೆಗಳಿಲ್ಲದೆಯೂ ನಿಮ್ಮ ತಲೆ ಸಾವಿರ ಹೋಳಾಗುವಂತಹ ತೀವ್ರವಾದ ಅನುಭವವಾಗಬಹುದು. ಆಗ ಝಂಡೂ ಬಾಮ್, ಡಬಲ್ ಆಕ್ಷನ್ ವಿಕ್ಸ್ ಬಾಮ್, ತ್ರಿಬಲ್ ಆಕ್ಷನ್ ಟೈಗರ್ ಬಾಮ್ ಕೂಡಾ ಉಪಯೋಗಕ್ಕೆ ಬಾರದಂತಹ ಭಯಾನಕ ಸ್ಥಿತಿ ಎದುರಾಗಬಹುದು.
ಏನಿದು, ಹರಿಕಥೆ ದಾಸರು ಸೀತಾ ಸ್ವಯಂವರದ ಹರಿಕಥೆಗೆ ಮೀಸಲಾದ ಎರಡೂವರೆ ಗಂಟೆಯಲ್ಲಿ, ಸಿನಿಮಾ ತಾರೆಯರ ತಾರಾಬಲ, ಅವರ ಸ್ವಯಂವರದಿಂದ ಮಕ್ಕಳ ಬಲಾಬಲಗಳವರೆಗೆ, ಕೇಂದ್ರ ಸರ್ಕಾರದ ನೀತಿಗಳಿಂದ ಹಿಡಿದು ಸ್ಥಳೀಯ ಪಂಚಾಯಿತಿ ಸಮಿತಿಯ ಉದ್ದೇಶಗಳವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಸಕಲ ವಿಷಯಗಳವರೆಗೆ, ಹಿಂದಿನ ಪ್ರಳಯ ಕಾಲದಿಂದ ಈಗಿನ ಪ್ರಳಯಾಂತಕ ಆಲ್ಕೈದಾದವರನ್ನು ಹಿಡಿಯುವವರೆಗೂ, ಏನೆಲ್ಲವನ್ನೂ ಹೇಳಿ ಸುಮಾರು ಒಂದೂವರೆ ಗಂಟೆ ಕಳೆದ ಹಾಗೆ ನಾನು ಇಲ್ಲಿ ಬಡಬಡಿಸುತ್ತಿದ್ದೇನೆ ಎಂದು ತಿಳಿದುಕೊಂಡಿದ್ದೀರಾ? ಏನು ಮಾಡಲಿ, ಮುಖ್ಯ ವಿಷಯವೇ ಮುಖ್ಯವಿಲ್ಲದಿರುವಾಗ, ನಿಮಗೆ ಸ್ವಲ್ಪವಾದರೂ ಟೈಗರ್ ಬಾಮ್ ಉಳಿಸೋಣವೆಂದು ನನ್ನ ಆಸೆ.
ಸಾಕಲ್ಲವೇ ಪೀಠಿಕೆ !
1969 ಏಪ್ರಿಲ್ 1
ಈ ಭಾರತದ ಭೂಮಿಗೆ ಭಾರವಾಗಲೆಂದು ಬ್ರಹ್ಮನು ನನ್ನನ್ನು ಕಳಿಸಿದ ದಿನ. ಅಂದಿನಿಂದ ಸುಮಾರು ಹದಿನೈದು ವರ್ಷಗಳು ಮನೆಯ ಹಿರಿಯರ ಮಾರ್ಗದರ್ಶನದಲ್ಲಿ (ಹಿಡಿತದಲ್ಲಿ!) ಕಳೆದವು. ಆ ದಿನಗಳ ನೆನಪುಗಳು ಅಸ್ಪಷ್ಟವಾಗಿವೆ.
1984 ಜೂನ್ 1
ನಾನು ಕಾಲೇಜಿಗೆ ಸೇರಿದ ದಿನ. ಕಾಲೇಜಿನ ದಿನಗಳು ಇಂದಿಗೂ ಮರೆಯಲಾಗದವು. ಸೌಂದರ್ಯಳನ್ನು ನೋಡಲು ಮೊದಮೊದಲು ಅಂಜಿಕೆ. ಆದರೂ, ಅವಳ ಪ್ರೀತಿ ಪಡೆಯಬೇಕೆಂಬ ಧ್ಯೇಯ ಒಂದೇ. ಕೊನೆಗೆ ಧೈರ್ಯ ಮಾಡಿ ಮಾತನಾಡಿಸಿದೆ. ಆ ನಂತರ ಸ್ನೇಹ-ಪ್ರೀತಿ ಪ್ರಾರಂಭವಾಯಿತು. ಸ್ನಾತಕೋತ್ತರ ಪದವಿಯವರೆಗೆ ಅವಳು ನನ್ನ ಸಹಪಾಠಿಯಾಗಿದ್ದಳು.
1991 ಡಿಶೆಂಬರ್ 1
ಸೌಂದರ್ಯಳಿಗೆ ಸುದಿನ. ಅಂದರೆ ಅಂದು ನನಗೆ ಕೆಲಸ, ನೌಕರಿ, job ಸಿಕ್ಕಿದ ದಿನ.
1992 ಫೆಬ್ರುವರಿ 29
ನನ್ನ ಪ್ರಣಯದ ಫಲ ಅಧೀಕೃತವಾಗಿದ್ದು. ಅರ್ಥಾತ್ ನಾನು ಸೌಂದರ್ಯಳನ್ನು ಮದುವೆಯಾದ ದಿನ.
1992 ಫೆಬ್ರುವರಿ 29 ರಿಂದ ಇಂದಿನವರೆಗಿನ ಮುಖ್ಯ ದಿನಗಳು ಅಥವಾ ತಾರೀಖುಗಳನ್ನು ನೆನಪಿನಲ್ಲಿಡಲು ಏಕೋ ಮನಸ್ಸಿಲ್ಲ ಅಥವಾ ಸೌಂದರ್ಯಳೇ ಈ ಕೆಲಸವನ್ನು ಮಾಡುವುದರಿಂದಲೂ ಇರಬಹುದು.
ಇಲ್ಲಿಯವರೆಗಿನ ವರುಷಗಳು ಬೇವು ಬೆಲ್ಲದಂತಹ ದಿನಗಳಿದ್ದಂತೆ ಅಥವಾ कभी ख़ुशी कभी गम ತರಹ. ಆದರೂ ನನಗೆ ಸದಾ ಖುಷಿ ಕೊಡುವ ದಿನ ಮಾತ್ರ ತಾರೀಖು ಫೆಬ್ರುವರಿ 29. ಹಾಗೆಯೇ ಸೌಂದರ್ಯಳಿಗೂ ಸದಾ ಗಮ್ ಕೊಡುವ ತಾರೀಖು ಫೆಬ್ರುವರಿ 29. ಕಾರಣ, ನಮ್ಮ ಮದುವೆಯ ವಾರ್ಷಿಕೋತ್ಸವ ನಾಲ್ಕು ವರುಷೋಕ್ಕೊಮ್ಮೆ ಬರುವುದು. ಆದರೂ ಈ ನಾಲ್ಕು ವರ್ಷಕ್ಕೊಮ್ಮೆ ನನಗೆ ಆಫೀಸಿನಲ್ಲಿ ಸಿಗುವ LTC ಸೌಲಭ್ಯವನ್ನು ಉಪಯೋಗಿಸಿ ಒಂದು ತಿಂಗಳ ರಜೆಯನ್ನೂ ಆಫೀಸಿನವರಿಗೆ ಮಾರಿ ಹಣ ಪಡೆದು ಸೌಂದರ್ಯಳ ಜೊತೆಗೆ ಎಲ್ಲಾದರೂ ಪಯಣಿಸಿ ಅವಳ ಸುಮುಖ ಸದಾ ನಗುಮುಖವಾಗಿಡುವ ನನ್ನ ಪ್ರಯತ್ನವಂತೂ ಫಲಿಸುತ್ತಲೇ ಇದೆ.
ಇದೇ ನೋಡಿ ನನ್ನ ಇಂದಿನವರೆಗೂ (2002) ಕಳೆದಂತಹ ಜೀವನದ ಮೂವತ್ಮೂರು ವರುಷಗಳ ಪಯಣ; ಹೇಗಿದೆ ಹೇಳಿ?
ಹರಟೆ ಮುಗಿಯಿತು.
post script
ನಾನು ಕೊಟ್ಟಿರುವ ಶೀರ್ಷಿಕೆಯ "ಪಯಣ" ಶಬ್ದ ನೋಡಿ ಏನೋ, ಪ್ರವಾಸ, ಪರ್ಯಟನ, ಸಂಚಾರ, ದೇಶಾಟನೆ ಬಗ್ಗೆ ಬರೆದಿರಬಹುದೆಂದು ನೀವು ಓದುವ ಮೊದಲು ಊಹಿಸಿರಬಹುದು. ನನ್ನ ಲೇಖನ ಮತ್ತೂಮ್ಮೆ ಓದಿ ನೋಡಿ. ಎಲ್ಲೋ ಸುಳಿವು (hint/clue) ಕೊಟ್ಟಿದ್ದೇನೆ.
ನಾನು ಏಪ್ರಿಲ್ 1 ರಂದು ಹುಟ್ಟಿದ್ದು, ಸ್ನೇಹಿತರೆಲ್ಲಾ ಇದುವರೆಗೂ ನನ್ನನ್ನು ರೇಗಿಸಿದ್ದರಿಂದ, ಆ ಸ್ನೇಹಿತರನ್ನು ಫೂಲ್ ಮಾಡಲು ಈ ಹರಟೆ ಪ್ರಾರಂಭ ಮಾಡಿದೆ. ಇದಕ್ಕೆ ಮೊದಲೂ ಇಲ್ಲ, ಕೊನೆಯೂ ಇಲ್ಲ. ಯಾವ ವಿಷಯದ ಪ್ರಸ್ತಾಪವೂ ಇಲ್ಲ, ಬರೀ ತಾಪ ಮಾತ್ರ ಇದೆ.
ಹಾಗೆಯೇ ನನ್ನ ಲೇಖನದ ಶೀರ್ಷಿಕೆಯನ್ನು "ಏಪ್ರಿಲ್ ಫೂಲ್" ಅಂತಲೂ ಬದಲಾಯಿಸಿಕೊಳ್ಳಿ. ನಾನಿನ್ನು ಬರಲೇ, ಸೌಂದರ್ಯ ಕಾಯುತ್ತಿದ್ದಾಳೆ ನನ್ನ ಸಿಹಿ ಮುತ್ತಿಗಾಗಿ!
No comments:
Post a Comment